ಕರೊನಾ ಸೋಂಕಿತನ ಬಲಿ ಪಡೆದ ಆಸ್ಪತ್ರೆ ವಿರುದ್ಧ ಎಫ್​​ಐಆರ್​; ರೋಗಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡದ ಆರೋಪ

Corona Death
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಹಾಸಿಗೆ ಇದ್ದರೂ ಕರೊನಾ ಸೋಂಕಿತ ವ್ಯಕ್ತಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ಕೊಡಲು ತಡ ಮಾಡಿ ಆತನ ಸಾವಿಗೆ ಕಾರಣವಾದ ಪೋರ್ಟಿಸ್​​ ಆಸ್ಪತ್ರೆ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ.

ಬೊಮ್ಮನಹಳ್ಳಿ ವಲಯ ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಕುಮಾರ್​, ಈ ಕುರಿತು ದೂರು ನೀಡಿದ್ದಾರೆ. ಈ ಮೇರೆಗೆ ಬನ್ನೇರುಘಟ್ಟ ರಸ್ತೆ ಪೋರ್ಟಿಸ್​​ ಆಸ್ಪತ್ರೆಯ ಆಡಳಿತ ಮಂಡಳಿ, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕ ಸೇರಿ ಆರು ಮಂದಿ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪುಟ್ಟೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಬನ್ನೇರುಘಟ್ಟ ರಸ್ತೆ ಪೋರ್ಟಿಸ್​ ಆಸ್ಪತ್ರೆಯಲ್ಲಿ 339 ಹಾಸಿಗೆಗಳು ಇರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಶೇ.50 ಹಾಸಿಗೆಗಳನ್ನು ಕೋವಿಡ್​ಗೆ ಮೀಸಲಿಡಬೇಕು. ಆದರೆ, ಕೇವಲ 45 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿದ್ದಾರೆ. ಏಪ್ರಿಲ್​ 20ರಂದು ಬಿಬಿಎಂಪಿಯಲ್ಲಿ ನೋಂದಾಯಿತ ಉತ್ಪಲ್​ ಕೆ. ಆರ್​. ಸಿನ್ನಾ ಎಂಬ ಕೋವಿಡ್​ ಸೋಂಕಿತನನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಸರಿಯಾದ ಸಮಯಕ್ಕೆ ಹಾಸಿಗೆ ನೀಡದೆ 3 ರಿಂದ 4 ಗಂಟೆಗಳ ಕಾಲ ಸತಾಯಿಸಿದ್ದು, ಕೊನೆಗೆ ಸಂಜೆ 5ರಿಂದ 6 ಗಂಟೆ ಅವಧಿಯಲ್ಲಿ ಸೋಂಕಿತ ಅಸುನೀಗಿದ್ದಾನೆ.

ರೋಗಿಯ ಸಾವಿಗೆ ಆಸ್ಪತ್ರೆಯ ಆಡಳಿತ ಮಂಡಳಿ, ನಿರ್ದೇಶಕರ ನಿರ್ಲಕ್ಷ್ಯವೇ ಕಾರಣ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಡಾ.ನಾಗೇಂದ್ರ ಕುಮಾರ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net