ದುರ್ಗದಹಳ್ಳಿ ಭೂಗಳ್ಳರ ವಿರುದ್ಧ ಎಫ್‌ಐಆರ್

DD_Hills
Published on

ತುಮಕೂರು: ಸಂರಕ್ಷಿತ ಅರಣ್ಯ ಪ್ರದೇಶ ದೇವರಾಯನದುರ್ಗದ ಸರ್ಕಾರಿ ಗೋಮಾಳದಲ್ಲಿ ಅತಿಕ್ರಮಪ್ರವೇಶಿಸಿ ರಸ್ತೆ ನಿರ್ಮಿಸಲು ಗಿಡಮರ ನಾಶ ಮಾಡಿದ ಭೂಗಳ್ಳರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದುರ್ಗದಳ್ಳಿ ವಾಸಿಗಳಾದ ಕೆ.ಚಂದಪ್ಪ ಹಾಗೂ ವಿನಯ್ ವಿರುದ್ಧ ಕ್ಯಾತಸಂದ್ರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸರ್ಕಾರಿ ಜಾಗದಲ್ಲಿ ಅನಧಿಕೃತ ರಸ್ತೆ ನಿರ್ಮಿಸಿ, ಗಿಡಮರ ನಾಶ ಮಾಡಿರುವ ಹಿನ್ನೆಲೆಯಲ್ಲಿ ಅನುಪನಹಳ್ಳಿ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಜಿ.ಎ.ಕಲ್ಲೇಶ್ ನೀಡಿರುವ ದೂರು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಕರಣ: ಊರ್ಡಿಗೆರೆ ಹೋಬಳಿ ದುರ್ಗದಹಳ್ಳಿಯ ಸರ್ವೇ ನಂ.4ರ ಗೋಮಾಳದಲ್ಲಿರುವ 49ಎಕರೆ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಅವೈಜ್ಞಾನಿಕ ರೀತಿಯಲ್ಲಿ ಜೆಸಿಬಿಯಿಂದ ಅಗೆದು ರಸ್ತೆ ನಿರ್ಮಿಸಲು ಅರಣ್ಯ ಸಂಪತ್ತನ್ನು ನಾಶ ಮಾಡಲಾಗಿದೆ.

ರೆಸಾರ್ಟ್ ನಿರ್ಮಿಸಲು ನೂರಾರು ಗಿಡಮರಗಳನ್ನು ಅನುಮತಿ ಪಡೆಯದೇ ಕಡಿದು ಹಾಕಿದ್ದು ಈ ಕುರಿತು ಸ್ಥಳೀಯರಿಗೂ ಯಾವುದೇ ಮಾಹಿತಿ ಇಲ್ಲ. ಸುಮಾರು 15 ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಅಕ್ರಮವಾಗಿ ನಿರ್ಮಾಣವಾಗುತ್ತಿರುವ ರೆಸಾರ್ಟ್‌ಗೆ ಅಧಿಕಾರಿಗಳು ಕೃಪಾಕಟಾಕ್ಷವಿದೆ ಎಂಬದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧುಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಬಯಲಿಗೆಳದಿದ್ದರು.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಸಿದ್ದೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮವಾಗಿ ಸರ್ಕಾರಿ ಜಾಗ ಪ್ರವೇಶಿಸಿ, ರಸ್ತೆ ನಿರ್ಮಾಣಕ್ಕೆ ಅರಣ್ಯ ಸಂಪತ್ತು ನಾಶ ಮಾಡಿರುವ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದು ಅರಣ್ಯ ಪ್ರದೇಶ ಅಥವಾ ಸರ್ಕಾರಿ ಜಾಗಗಳಲ್ಲಿ ಅತಿಕ್ರಮ ಪ್ರವೇಶಿಸುವ ಭೂಗಳ್ಳರ ಮಾಹಿತಿ ನೀಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net