ಪತ್ರಕರ್ತನ ಹೆಸರಿನಲ್ಲಿ ವಂಚಿಸುತ್ತಿದ್ದ ವ್ಯಕ್ತಿಯ ವಿರುದ್ಧ ಎರಡು ಎಫ್‌ಐಆರ್‌

Ravish-Hegde
Published on

ಶಿರಸಿ: ಪತ್ರಕರ್ತನ ಹೆಸರಿನಲ್ಲಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ರವೀಶ ಹೆಗಡೆ ವಿರುದ್ಧ ಅಂತೂ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ, ಬ್ಯಾಂಕ್‌ಗೆ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿದ ಸಂಬಧ ಎರಡು ಪ್ರತ್ಯೇಕ ಪ್ರಕರಣಗಳು ಎರಡು ಪ್ರತ್ಯೇಕ ಠಾಣೆಗಳಲ್ಲಿ ಭಾನುವಾರ ದಾಖಲಾಗಿವೆ. ಸ್ವಸ್ತಿಕ್ ಮೀಡಿಯಾ ಎಂಬ ನ್ಯೂಸ್ ವೆಬ್‌ಸೈಟ್ ಒಂದರ ಸಂಪಾದಕ ರವೀಶ ಹೆಗಡೆ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ ಎಂಬ ಮಾಹಿತಿ ಇದೆ. ಆತ ವಂಚನೆವೆಸಗಿರುವ ಸುದ್ದಿ ಶಿರಸಿಯಾದ್ಯಂತ ಜನರ ಬಾಯಲ್ಲಿತ್ತು. ಆದರೆ, ಪ್ರಕರಣ ದೂರು ಮಾತ್ರ ದಾಖಲಾಗಿರಲಿಲ್ಲ.
ಆತ್ಮಹತ್ಯೆಗೆ ಪ್ರಚೋದನೆ:
ಶಿರಸಿಯ ಪ್ರಸಿದ್ಧ ಆಭರಣ ಅಂಗಡಿ ಕಾಮದೇನು ಜ್ಯೂವೆಲರ್ಸ್ ಮಾಲೀಕರ ಪುತ್ರ ಪ್ರೀತಮ್ ಪಾಲಕನರ್(36) ಮೇ 14 ರಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಪತ್ರಕರ್ತರಾದ ತಾಲೂಕಿನ ಅಜ್ಜಿಬಳ್‌ನ ರವೀಶ ವೆಂಕಟಮರಣ ಹೆಗಡೆ, ಗಣೇಶ ಸುಬ್ರಾಯ ಆಚಾರಿ, ಆರ್‌ಐಟಿ ಕಾರ್ಯಕರ್ತ ಓಂ ಹೆಗಡೆ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಮೃತರ ಸಹೋದರ ಪವನ್ ಪಾಲನಕರ್ ದೂರು ನೀಡಿದ್ದಾರೆ.
ವೈಯಕ್ತಿಕ ವಿಚಾರದಲ್ಲಿ ಹಾಗೂ ವ್ಯವಹಾರದ ವಿಚಾರದಲ್ಲಿ ಇವರು ತಮ್ಮ ಸಹೋದರನಿಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಹಣ ನೀಡುವಂತೆ ಪೀಡಿಸುತ್ತಿದ್ದರು. ಅದನ್ನು ಮನಸ್ಸಿಗೆ ಹಚ್ಚಿಕೊಂಡ ಪ್ರೀತಮ್ ಅವರು ಆತ್ಮಹತ್ಯೆಗೆ ಶರಣಾದರು ಎಂದು ಪವನ್ ಪಾಲನಕರ್ ದೂರಿನಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ಗೆ ವಂಚನೆ

ಒಂದೇ ಕಾರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವೆಡೆ ಸಾಲ ಪಡೆದು ಲಕ್ಷಾಂತರ ರೂ. ವಂಚನೆ ಮಾಡಿದ ಬಗ್ಗೆ ರವೀಶ ಹೆಗಡೆ ವಿರುದ್ಧ ಶಿರಸಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆಡಿಸಿಸಿ ಬ್ಯಾಂಕ್‌ನ ಸಿಪಿ ಬಝಾರ್ ಶಾಖೆಯ ವ್ಯವಸ್ಥಾಪಕಿ ಅನಿತಾ ನೇರಲಕಟ್ಟೆ ದೂರು ನೀಡಿದ್ದಾರೆ.ಅಜ್ಜಿಬಾಳದ ವೆಂಕಟರಮಣ ಗಜಾನನ ಹೆಗಡೆ, ಗೋಳಿಯ ನೆಗ್ಗು ಗ್ರಾಮದ ಮಣಿಕಂಠ ಚಂದ್ರಶೇಖರ ನಾಯ್ಕ ಅವರು ಈ ಸಾಲಕ್ಕೆ ಜಾಮೀನುದಾರರಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಬಿಳಿ ಬಣ್ಣದ ಹ್ಯುಂಡೈ ಕ್ರೆಟಾ ಕಾರು ತೋರಿಸಿ, ಅದನ್ನು ಹುಬ್ಬಳ್ಳಿಯ ಕೆನರಾ ಮೋಟರ್ಸ್ನಿಂದ ಖರೀದಿಸುತ್ತಿರುವುದಾಗಿ ಶೋ ರೂಂ ಹೆಸರಿನ ದರ ಪತ್ರ, ಕೆನರಾ ಮೋಟರ್ಸ್ಗೆ ಹಣ ಪಾವತಿ ಮಾಡಿದ ವೋಚರ್, ಟ್ಯಾಕ್ಸ್ ಇನ್ವಾಯ್ಸ್, ವಿಮಾ ದಾಖಲಾತಿಗಳನ್ನು ಬ್ಯಾಂಕ್‌ಗೆ ಸಲ್ಲಿಸಿದ್ದ ಎನ್ನಲಾಗಿದೆ. ಅಲ್ಲದೆ, ಸಾಲದ ನಿಯಮದಂತೆ ಕಾರಿನ ಒಂದು ಕೀಯನ್ನೂ ಸಹ ಸಲ್ಲಿಸಿ, 19.98 ಲಕ್ಷ ರೂ.ಸಾಲ ಪಡೆದಿದ್ದ ಎನ್ನಲಾಗಿದೆ. ಆದರೆ, ಇದೇ ಕಾರಿನ ಹೆಸರಿನಲ್ಲಿ ಬ್ಯಾಂಕ್‌ನ ಇನ್ನೂ ಕೆಲವು ಶಾಖೆಗಳಲ್ಲಿ ಸಾಲ ಪಡೆದಿರುವ ಮಾಹಿತಿ ತಿಳಿದು ಬಂದಿದೆ ಪರಿಶೀಲಿಸಿದಾಗ ಬ್ಯಾಂಕ್‌ಗೆ ನೀಡಿದ ಕಾರಿನ ಕೀ ಹಾಗೂ ಹಲವು ದಾಖಲೆಗಳು ನಕಲಿ ಎಂಬುದು ಪತ್ತೆಯಾಗಿದೆ ಎಂದು ಬ್ಯಾಂಕ್ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net