ಎನ್‌ಡಬ್ಲುಕೆಆರ್‌ಟಿಸಿ ಮೂವರು ಅಧಿಕಾರಿಗಳಿಗೆ 50 ಸಾವಿರ ರೂ.ದಂಡ

consumer-forma-order
Published on

ಕಾರವಾರ: ಒಪ್ಪಂದದ ಮೇರೆಗೆ ಬಸ್ ಸೇವೆ ನೀಡುವುದಾಗಿ ಠೇವಣಿ ಪಡೆದು, ಕೊನೆಯ ಕ್ಷಣದಲ್ಲಿ ರದ್ದು ಮಾಡಿದ ಎನ್‌ಡಬ್ಲುಕೆಆರ್‌ಟಿಸಿ ಕುಮಟಾ ಡಿಪೋ ಮ್ಯಾನೇಜರ್, ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿಗೆ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗವು 50 ಸಾವಿರ ರೂ. ದಂಡ ವಿಧಿಸಿದೆ.
ಎನ್‌ಡಬ್ಲುಕೆಆರ್‌ಟಿಸಿಯ ನಿವೃತ್ತ ಉದ್ಯೋಗಿ ಕುಮಟಾ ಅಳ್ವೇಕೋಡಿಯ ಶೇಷು ಹರಿಕಾಂತ ಅವರು ಹೂಡಿದ ದಾವೆಗೆ ಸಂಬಂಧಿಸಿ ಆಯೋಗದ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಹಾಗೂ ಸದಸ್ಯೆ ನಯನಾ ಕಾಮತೆ ಅವರ ಪೀಠವು ತೀರ್ಪು ಪ್ರಕಟಿಸಿದೆ. ಶೇಷು ಅವರು ಠೇವಣಿ ಮಾಡಿದ್ದ 21 ಸಾವಿರ ರೂ.ಗಳನ್ನು ಶೇ.7 ರ ಬಡ್ಡಿಯ ಜತೆಗೆ ಮರಳಿಸಬೇಕು ಹಾಗೂ ದಂಡವನ್ನು ದೂರುದಾರರಿಗೆ ಜಂಟಿಯಾಗಿ ಪಾವತಿಸಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

2022 ರ ಜುಲೈ 15 ರಂದು ದಾವಣಗೆರೆಯಲ್ಲಿ ನಡೆಯುವ ತಮ್ಮ ಕುಟುಂಬದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಲು ಬಸ್ ಬಾಡಿಗೆಗೆ ಬೇಕು ಎಂದು ಶೇಷು ಹರಿಕಾಂತ ಕುಮಟಾ ಡಿಪೋಗೆ ಅರ್ಜಿ ಸಲ್ಲಿಸಿದ್ದರು. ಬಸ್‌ನ್ನು ಒಪ್ಪಂದದ ಮೇರೆಗೆ ಬಾಡಿಗೆಗೆ ನೀಡುವುದಾಗಿ ಒಪ್ಪಿದ್ದ ಹಿರಿಯ ಅಽಕಾರಿಗಳು 21 ಸಾವಿರ ರೂ. ಠೇವಣಿ ಪಾವತಿಸಿಕೊಂಡಿದ್ದರು. ಆದರೆ, ಜು.14 ರ ರಾತ್ರಿ ಬಸ್ ಕೊಡಲು ಸಾಧ್ಯವಿಲ್ಲ. ನೀವು ಖಾಸಗಿ ಬಸ್‌ನಲ್ಲಿ ಹೋಗಿ ಎಂದು ಡಿಪೋ ಮ್ಯಾನೇಜರ್ ಸೇರಿ ಹಲವು ಅಽಕಾರಿಗಳು ಹೇಳಿದರು. ಇದರಿಂದ 42 ಜನರು ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಿಲ್ಲ. ನಮ್ಮ ಮರ್ಯಾದೆ ಹೋಯಿತು. ಹಣ ವ್ಯರ್ಥವಾಯಿತು. ಈ ಬಗ್ಗೆ ಶಿರಸಿ ಡಿಸಿ, ಡಿಟಿಸಿ ಅವರಲ್ಲಿ ಬೇಡಿಕೊಂಡರೂ ಸ್ಪಂದಿಸಿಲ್ಲ ಎಂದು ಶೇಷು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಪ್ರತಿಭಟನಾ ಸಮಾವೇಶಕ್ಕೆ ತೆರಳುತ್ತಿದ್ದರೇ..?

ಕುಮಟಾ ಡಿಪೋ ಮ್ಯಾನೇಜರ್, ಡಿಸಿ, ಡಿಟಿಸಿ ಪ್ರಾಧಿಕಾರಕ್ಕೆ ಹಾಜರಾಗಿ ಶೇಷು ಅವರು ಆರೊಪ ಸರಿ ಇಲ್ಲ. ಅವರು ನಮ್ಮ ನಿವೃತ್ತ ಉದ್ಯೋಗಿ. ಜು.15 ರಂದು ದಾವಣಗೆರೆಯಲ್ಲಿ ನಡೆಯುವ ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನಾ ಸಮಾವೇಶಕ್ಕೆ ನಿಗಮದ ಉದ್ಯೋಗಿಗಳನ್ನು ಕರೆದೊಯ್ಯಲು ಬಸ್ ಬುಕ್ ಮಾಡಿದ್ದರು. ಅದನ್ನು ತಿಳಿದ ನಮ್ಮ ಹಿರಿಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಬಸ್ ಒದಗಿಸದಂತೆ ಸೂಚನೆ ನೀಡಿದ್ದರು. ಇದರಿಂದ ಪಡೆದ ಠೇವಣಿಯನ್ನು ವಾಪಸ್ ನೀಡಿದ್ದೇವೆ ಎಂದು ತಮ್ಮ ವಾದ ಮಂಡಿಸಿದರು. ಆದರೆ, ಎದುರುದಾರರ ವಾದ ಒಪ್ಪದ ಆಯೋಗವು, ಶೇಷು ಅವರು ನೌಕರರ ಸಮಾವೇಶಕ್ಕೆ ತೆರಳಲು ಬಸ್ ಬುಕ್ ಮಾಡಿದ್ದಾರೆ ಎಂದು ಎನ್‌ಡಬ್ಲುಕೆಆರ್‌ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತೂ ಯಾವುದೇ ದಾಕಲೆ ಒದಗಿಸಿಲ್ಲ. ಇದರಿಂದ ಅವರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net