ಖೊಟ್ಟಿ ಕೊಳವೆಬಾವಿ ರೈತನಿಗೆ ದಂಡ

01 SDLP 04
ಶಿಡ್ಲಘಟ್ಟ ತಾಲೂಕಿನ ತಿಮ್ಮನಾಯಕನಹಳ್ಳಿಯಲ್ಲಿ ದೇವರಾಜ ಅರಸು ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಖೊಟ್ಟಿ ಕೊಳವೆಬಾವಿ ಕೊರೆಸಿರುವ ಸ್ಥಳಕ್ಕೆ ನಿಗಮದ ಕೇಂದ್ರ ಕಚೇರಿ ಎಇಇ ಬೈರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ವ್ಯವಸ್ಥಾಪಕ ಶಿವಾನಂದರೆಡ್ಡಿ, ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಇತರರು ಇದ್ದರು.
Published on

ಜಿಲ್ಲಾ ಅಧಿಕಾರಿ ವಿರುದ್ಧ ಕೇಸ್ ದಾಖಲಿಸಲು ಅರಸು ನಿಗಮ ಕ್ರಮ - ಅಧಿಕಾರಿಗಳಿಂದ ಸ್ಥಳ ಪರಿಶೀಲನೆ


ಶಿಡ್ಲಘಟ್ಟ: ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮಂಜೂರಾಗಿದ್ದ ಕೊಳವೆಬಾವಿ ಕೊರೆಸದೆ ಡ್ರಿಲ್ಲಿಂಗ್ ಮಾಡಿದಂತೆ ಕೇಸಿಂಗ್ ಪೈಪ್ ನಿಲ್ಲಿಸಿ ನಕಲಿ ದಾಖಲೆ ಸೃಷ್ಟಿಸಿದ್ದ ಪ್ರಕರಣದಲ್ಲಿ ಫಲಾನುಭವಿ ರೈತ, ಬೋರ್‌ವೆಲ್ ಏಜೆನ್ಸಿ ಮತ್ತು ನಿಗಮದ ಜಿಲ್ಲಾ ಕಚೇರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ನಿಗಮದ ಕೇಂದ್ರ ಕಚೇರಿ ಅಧಿಕಾರಿಗಳು ಮುಂದಾಗಿದ್ದಾರೆ.
ತಾಲೂಕಿನ ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿಗೆ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರಾಗಿತ್ತು. ಆದರೆ, ರೈತ ನಾರಾಯಣಸ್ವಾಮಿ ಕೊಳವೆಬಾವಿ ಕೊರೆಸದೆ, 8 ಅಡಿ ಆಳಕ್ಕೆ ಕೇಸಿಂಗ್ ಪೈಪ್ ಇಟ್ಟು ಸುತ್ತಲೂ ಎಂ ಸ್ಯಾಂಡ್ ಹಾಕಿ ಡ್ರಿಲ್ಲಿಂಗ್ ಮಾಡಿದಂತೆ ದಾಖಲೆ ಸೃಷ್ಟಿಸಿದ್ದರು. ಇದರ ಆಧಾರದಲ್ಲಿ ನಿಗಮದ ಜಿಲ್ಲಾ ಕಚೇರಿಯಿಂದ 1.9 ಲಕ್ಷ ರೂ.ಗಳನ್ನು ಬೋರ್‌ವೆಲ್ ಏಜೆನ್ಸಿಗೆ ಮಂಜೂರು ಮಾಡಲಾಗಿತ್ತು.
ಗ್ರಾಮದ ರೈತರು ಸಂಶಯ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯ ಎಇಇ ಬೈರಪ್ಪ ಮತ್ತು ಇತರ ಸಿಬ್ಬಂದಿ ಸ್ಥಳ ಶನಿವಾರ ಪರಿಶೀಲನೆ ನಡೆಸಿದರು. ಕೊರೆಸದ ಕೊಳವೆಬಾವಿಗೆ ಅಳವಡಿಸಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ತೆಗೆಯುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ, ಕೊಳವೆಬಾವಿ ಕೊರೆಸದೆ ನಕಲಿ ದಾಖಲೆ ಸೃಷ್ಟಿಸಿದ್ದ ರೈತ ನಾರಾಯಣಸ್ವಾಮಿ, ಈತನೊಂದಿಗೆ ಕೈಜೋಡಿಸಿದ್ದ ಬೋರ್‌ವೆಲ್ ಏಜೆನ್ಸಿ ಹಾಗೂ ಸಮರ್ಪಕವಾಗಿ ಸ್ಥಳ ಪರಿಶೀಲಿಸದೆ ಹಣ ಪಾವತಿಸಿ ಕರ್ತವ್ಯಲೋಪ ಎಸಗಿದ ನಿಗಮದ ಜಿಲ್ಲಾ ವ್ಯವಸ್ಥಾಪಕರ ವಿರುದ್ಧವೂ ಕ್ರಿಮಿನಲ್ ಕೇಸನ್ನು ದಾಖಲಿಸುವುದಾಗಿ ತಿಳಿಸಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಾನಂದರೆಡ್ಡಿ, ರೈತ ಸಂಘದ ಪುಟ್ಟಣ್ಣಯ್ಯ ಬಣದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ತಿಮ್ಮನಾಯಕನಹಳ್ಳಿ ಅರುಣ್ ಕುಮಾರ್, ರೈತ ಮುಖಂಡ ಎಸ್.ಎಂ.ರವಿಪ್ರಕಾಶ್, ಬೆಸ್ಕಾಂ ಅಧಿಕಾರಿಗಳು ಇದ್ದರು.

ವಸೂಲಿಗೆ ಕ್ರಮ
ಈಗಾಗಲೇ ಬಿಡುಗಡೆ ಆಗಿರುವ 1.9 ಲಕ್ಷ ರೂ.ಗಳನ್ನು ರೈತ, ಬೋರ್‌ವೆಲ್ ಏಜೆನ್ಸಿ ಹಾಗೂ ಜಿಲ್ಲಾ ನಿಗಮದ ಕಚೇರಿ ಅಧಿಕಾರಿಗಳಿಂದ ವಸೂಲಿ ಮಾಡಿ ಸರ್ಕಾರಕ್ಕೆ ಮರುಪಾವತಿಸಲು ಕ್ರಮ ಕೈಗೊಳ್ಳುವುದಾಗಿ ನಿಗಮದ ಕೇಂದ್ರ ಕಚೇರಿಯ ಎಇಇ ಬೈರಪ್ಪ ದೂರುದಾರರಿಗೆ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net