ಅಲ್ಪಾವಧಿಯಲ್ಲಿ ಸಮಸ್ಯೆಗಳಿಗೆ ಸಿಗುತ್ತಾ ಪರಿಹಾರ?

3
Published on

ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಕಾರ್ಯವೈಖರಿಯದ್ದೇ ಚರ್ಚೆ

ಎನ್. ವೆಂಕಟೇಶ್, ಚಿಕ್ಕಬಳ್ಳಾಪುರ
ಜಿಲ್ಲೆಯ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೊಸದಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಹೊಸಬರ ನೇತೃತ್ವದಲ್ಲಿ ವಿವಿಧ ಯೋಜನೆಗಳ ಅನುಷ್ಠಾನದೊಂದಿಗೆ ಪಟ್ಟಣ, ನಗರಗಳು ಮತ್ತಷ್ಟು ಪ್ರಗತಿ ಕಾಣಬೇಕಾಗಿದೆ.
ಹೌದು! ಗುಡಿಬಂಡೆ ಪಟ್ಟಣ ಪಂಚಾಯಿತಿ ಹೊರತುಪಡಿಸಿ ಜಿಲ್ಲೆಯ 4 ನಗರಸಭೆ ಮತ್ತು 1 ಪುರಸಭೆಗೆ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಮುಂದಿನ 10-12 ತಿಂಗಳ ಆಡಳಿತ ನಿರ್ವಹಿಸುವ ಅವಕಾಶ ಇರಲಿದೆ. ಈ ಅಲ್ಪಾವಧಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಮಾತುಗಳು ವ್ಯಾಪಕವಾಗಿ ಕೇಳಿಬಂದಿದೆ. ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸೆ.25ರಂದು ಚುನಾವಣೆ ನಿಗದಿಯಾಗಿದೆ.


ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಯ ಮೀಸಲಾತಿಗೆ ಸಂಬಂಧಿಸಿದಂತೆ ಉದ್ಭವವಾಗಿದ್ದ ವಿವಾದ ಹಿನ್ನೆಲೆಯಲ್ಲಿ ಒಂದೂವರೆ ವರ್ಷ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಕೇವಲ ಅಧಿಕಾರಿಗಳ ಉಸ್ತುವಾರಿಯಲ್ಲಿ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಕಚೇರಿ ನಿರ್ವಹಣೆಯಾಗಿದ್ದು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್ ಆಡಳಿತಾಧಿಕಾರಿಗಳಾಗಿ ಹೊಣೆ ಹೊತ್ತಿದ್ದರೂ ಇಲಾಖೆ ಕೆಲಸದ ಒತ್ತಡದಲ್ಲಿ ನಿರೀಕ್ಷೆಗೆ ಅನುಗುಣವಾಗಿ ಇತ್ತ ಗಮನಹರಿಸಲಿಲ್ಲ. ಇದರಿಂದ ವಾರ್ಡ್‌ಗಳಲ್ಲಿನ ಸಮಸ್ಯೆಗಳು, ಜನರ ಅಹವಾಲುಗಳು ತ್ವರಿತ ಗತಿಯಲ್ಲಿ ಪರಿಹಾರ ಕಾಣಲಿಲ್ಲ. ಬಹುತೇಕ ಸದಸ್ಯರಿಗೆ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೈಕಟ್ಟಿ ಹಾಕಿದಂತಹ ಪರಿಸ್ಥಿತಿ ಇತ್ತು ಎಂಬ ಆರೋಪಗಳು ಕೇಳಿ ಬಂದಿವೆ. ಈಗ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರಿಗಳ ಮೂಲಕ ಆಡಳಿತ ನಿರ್ವಹಿಸುವ ಅವಕಾಶ ಮತ್ತೆ ಸಿಕ್ಕಿದೆ. ಉಳಿದಿರುವುದು 10 ತಿಂಗಳ ಅಧಿಕಾರ ಮಾತ್ರ. ಈ ಅವಧಿಯಲ್ಲಿ ಕಾರ್ಯವೈಖರಿ ಹೇಗಿರುತ್ತದೆ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.

ಶಾಸಕರ ಬೆಂಬಲಿಗರ ಹಿಡಿತ
ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿದಂತೆ ಬಹುತೇಕ ನಗರ, ಪಟ್ಟಣ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆಗಳು ಬಹುತೇಕ ಶಾಸಕರ ಬೆಂಬಲಿಗರ ಹಿಡಿತದಲ್ಲಿದೆ. ಚಿಂತಾಮಣಿ ನಗರಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್, ಬಾಗೇಪಲ್ಲಿ ಪುರಸಭೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗೌರಿಬಿದನೂರು ನಗರಸಭೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ, ಶಿಡ್ಲಘಟ್ಟ ನಗರಸಭೆಯಲ್ಲಿ ಶಾಸಕ ಮೇಲೂರು ರವಿಕುಮಾರ್ ಬೆಂಬಲಿಗರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಜಿಲ್ಲಾ ಕೇಂದ್ರ ನಗರ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಅಧಿಕಾರ ಹಿಡಿದಿಲ್ಲ. ಸಂಸದ ಡಾ.ಕೆ.ಸುಧಾಕರ್ ತಂತ್ರಗಾರಿಕೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಡಳಿತದ ವಿಚಾರದಲ್ಲಿ ಹಗ್ಗಜಗ್ಗಾಟ ನಡೆಯುವ ಲಕ್ಷಣ ಗೋಚರವಾಗುತ್ತಿವೆ. ಇದರ ಮೊದಲ ಹಂತವಾಗಿ ಉಪ ವಿಭಾಗಾಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಹೊಣೆ ನೀಡಲಾಗಿದೆ. ಇಲ್ಲಿ ಪ್ರಭಾರ ಪೌರಾಯುಕ್ತರಾಗಿದ್ದ ಉಮಾಶಂಕರ್ ಅಧಿಕಾರವನ್ನು ಹಿಂಪಡೆಯಲಾಗಿದೆ. ತ್ವರಿತವಾಗಿ ಶಾಸಕ ಪ್ರದೀಪ್ ಈಶ್ವರ್ ಬೇಕಾದವರನ್ನು ಇಲ್ಲಿನ ಹುದ್ದೆಯಲ್ಲಿ ಕೂರಿಸಲು ಯತ್ನಿಸುತ್ತಿದ್ದಾರೆ. ಇದರೊಂದಿಗೆ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಟಕ್ಕೆ ತಕ್ಕಂತೆ ಅಧಿಕಾರಿ ಕುಣಿಯದಂತೆ ನೋಡಿಕೊಳ್ಳುವ ಕೆಲಸವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಸಮಸ್ಯೆಗಳು ಸಾಕಷ್ಟು: ಚಿಕ್ಕಬಳ್ಳಾಪುರವನ್ನು ಪ್ಲಾಸ್ಟಿಕ್‌ಮುಕ್ತ ಜಿಲ್ಲೆಯನ್ನಾಗಿ ಈಗಾಗಲೇ ಘೋಷಿಸಲಾಗಿದೆ. ಸ್ವಚ್ಛತಾ ಹೀ ಸೇವಾ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಇದರ ನಡುವೆಯೂ ನಗರ, ಪಟ್ಟಣ ಪ್ರದೇಶಗಳಲ್ಲಿ ನೈರ್ಮಲ್ಯ ಹದಗೆಟ್ಟಿದೆ. ಎಲ್ಲೆಂದರಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು, ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.

  • ಏನೇನು ಕೆಲಸಗಳಾಗಬೇಕು?
  • ವಾರ್ಡ್‌ಗಳಲ್ಲಿ ಸ್ವಚ್ಛತೆ ನಿರ್ವಹಣೆ
  • ಬೀದಿದೀಪ, ರಸ್ತೆ, ಚರಂಡಿ ವ್ಯವಸ್ಥೆ
  • ಸಮರ್ಪಕ ಕುಡಿಯುವ ನೀರು ಪೂರೈಕೆ
  • ಸರ್ಕಾರಿ ಜಾಗಗಳ ರಕ್ಷಣೆ
  • ಉದ್ಯಾನಗಳ ಅಭಿವೃದ್ಧಿ
  • ಸಾರ್ವಜನಿಕರಿಗೆ ಕಚೇರಿಗಳಲ್ಲಿ ಗುಣಮಟ್ಟದ ಸೇವೆ

ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆಯ ಸಮರ್ಪಕ ನಿರ್ವಹಣೆಯನ್ನು ಕಡೆಗಣಿಸಲಾಗುತ್ತಿದೆ. ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳು ಸಿಗುವಲ್ಲಿ ವಿಳಂಬವಾಗುತ್ತಿದೆ. ಇದರ ಬಗ್ಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಗಮಹರಿಸಿ, ಪರಿಹಾರ ಕ್ರಮ ಕೈಗೊಳ್ಳಬೇಕು. ಕಚೇರಿಗಳಲ್ಲಿ ಆಡಳಿತ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡಬೇಕು.| ವಿ.ರವಿಕುಮಾರ್ ಕನ್ನಡ ಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net