ಮರಳು ಗಣಿಗಾರಿಕೆ ಸಕ್ರಮಗೊಳಿಸಲು ಉಪಾಯ ಹುಡುಕಿ-ಅಧಿಕಾರಿಗಳಿಗೆ ಡಿಸಿ ಸೂಚನೆ

Find a way to regularize sand mining-DC notice to officials
Published on

ಕಾರವಾರ: ನ್ಯಾಯಾಲಯದ ಆದೇಶ ಉಲ್ಲಂಘನೆಯಾಗದಂತೆ ಹೇಗೆ ಮರಳು ಸಾಗಣೆಗೆ ಅವಕಾಶ ನೀಡಬಹುದು ಎಂಬ ಬಗ್ಗೆ ಅಭಿಪ್ರಾಯ ತಿಳಿಸಿ ಎಂದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹೇಳಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸಭೆ ನಡೆಸಿ ಅವರು ಮಾತನಾಡಿದರು. ಕಾಳಿ ನದಿ ಪಾತ್ರದಲ್ಲಿ 6, ಅಂಕೋಲಾದ ಗಂಗಾವಳಿಯಲ್ಲಿ 2, ಕುಮಟಾದ ಅಘನಾಶಿನಿಯಲ್ಲಿ 4, ಹೊನ್ನಾವರದ ಶರಾವತಿ ಬದಿಯಲ್ಲಿ 7 ಸೇರಿ ಒಟ್ಟು ನಾಲ್ಕು ನದಿಗಳ 19 ಮರಳು ದಿಬ್ಬಗಳಲ್ಲಿ ಬೋಟ್‌ಗಳ ಓಡಾಟಕ್ಕೆ ಅನುಕೂಲವಾಗುವಂತೆ 12.44 ಮೆಟ್ರಿಕ್ ಟನ್ ಮರಳು ತೆರವುಗೊಳಿಸಲು ರಾಜ್ಯ ಸಿಆರ್‌ಜಡ್ ಉಸ್ತುವಾರಿ ಸಮಿತಿ (ಕೆಸಿಜಡ್‌ಎಂಎ) ಅನುಮತಿ ನೀಡಿದೆ. ಆದರೆ, ಮರಳನ್ನು ಬೇರೆಡೆ ಸಾಗಿಸಲು ಮಾರಾಟ ಮಾಡಲು ಅವಕಾಶವಿಲ್ಲ.
ಆದರೆ, ಜಿಲ್ಲೆಯಲ್ಲಿ ಮರಳಿನ ಕೊರತೆಯಿಂದ ತೀವ್ರ ಸಮಸ್ಯೆಯಾಗಿದೆ. ಎಂ.ಸ್ಯಾಂಡ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕರಾವಳಿಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಜಿಲ್ಲೆಯ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಮೀರದಂತೆ ಮರಳು ಗಣಿಗಾರಿಕೆ ಪ್ರಾರಂಭಿಸುವ ಮಾರ್ಗೋಪಾಯ ಹುಡುಕಿ ಎಂದರು.
ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಸಿಆರ್‌ಜಡ್ ಪ್ರಾದೇಶಿಕ ನಿರ್ದೇಶಕ ಡಿಎಫ್‌ಒ ಪ್ರಶಾಂತ್, ಕಾರವಾರ ಡಿಎಫ್‌ಒ ರವಿಶಂಕರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆಶಾ, ಜಿಲ್ಲಾ ಪರಿಸರ ಅಽಕಾರಿ ಸಂತೋಷ್ ಸಮಿತಿಯ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net