

| ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಣ ಕಾಶಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಈಗ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. 72 ವಸಂತ ಕಂಡ ಈ ವಿಶ್ವವಿದ್ಯಾಲಯಕ್ಕೆ ಸರ್ಕಾರ ಬರೋಬ್ಬರಿ 185 ಕೋಟಿ ರೂ. ಅನುದಾನ ಬಾಕಿ ಉಳಿಸಿಕೊಂಡಿದೆ.
ವಿದ್ವಾಂಸರು, ವಿಜ್ಞಾನಿಗಳು, ಸಂಶೋಧಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಜಕೀಯ ಪ್ರಮುಖರನ್ನೂ ನೀಡಿದ ಹೆಮ್ಮೆ ಕರ್ನಾಟಕ ವಿಶ್ವವಿದ್ಯಾಲಯದ್ದು. ಸ್ವತಃ ಸಚಿವರೇ ಕರ್ನಾಟಕ ವಿಶ್ವವಿದ್ಯಾಲಯವನ್ನು ಮುಕ್ತಕಂಠದಿಂದ ಹೊಗಳುವುದುಂಟು. ಆದರೆ, ಅನುದಾನ ಕೊಡುವ ವಿಚಾರಕ್ಕೆ ಬಂದರೆ ತಾರತಮ್ಯದ ದರ್ಶನವಾಗುತ್ತದೆ. ನಾಲ್ಕು ವರ್ಷದಿಂದ ಸರ್ಕಾರ ಬಿಡಿಗಾಸೂ ಬಿಡುಗಡೆ ಮಾಡಿಲ್ಲ. ಪ್ರತಿ ತಿಂಗಳು ವಿದ್ಯುತ್, ನೀರು, ವಾಹನ ನಿರ್ವಹಣೆ ಸೇರಿ ಕಚೇರಿ ಖರ್ಚು ಸುಮಾರು 6 ಕೋಟಿ ರೂಪಾಯಿ ಬರುತ್ತದೆ. ಇದನ್ನೇ ಸರಿದೂಗಿಸುವುದು ಕಷ್ಟ. ಇಂತಹುದರಲ್ಲಿ ವೇತನ, ಪಿಂಚಣಿ ಸೇರಿ ಇನ್ನಿತರ ಸೌಲಭ್ಯಗಳ ಭಾರವನ್ನು ವಿಶ್ವವಿದ್ಯಾಲಯದ ಮೇಲೆಯೇ ಹಾಕಲಾಗಿದೆ. ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಅಲ್ಪ ಆದಾಯದಲ್ಲೇ ವಿವಿ ನಡೆಯುತ್ತಿದೆ.
ಹಳೆಯ ವಿವಿ ಎನ್ನುವ ಹಿರಿಮೆಯೇ ಒಂದರ್ಥದಲ್ಲಿ ಶಾಪವಾಗಿ ಪರಿಣಮಿಸಿದೆ. ಪ್ರಾಧ್ಯಾಪಕರ ನಿವೃತ್ತಿಯ ಬಳಿಕ ಆ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗುತ್ತಿಲ್ಲ. ಹೀಗಾಗಿ, ವಿವಿ ಅನಿವಾರ್ಯವಾಗಿ ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಿಸುತ್ತಿದೆ. ಇದೀಗ ಶೇ. 70 ಅತಿಥಿ ಉಪನ್ಯಾಸಕರಿಂದಲೇ ಪಾಠ ನಡೆದಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಬಹುದು ಎನ್ನುವ ಭರವಸೆಯಿಂದ ವಿಶ್ವವಿದ್ಯಾಲಯವೇ ಪ್ರತಿ ತಿಂಗಳು ಅತಿಥಿ ಉಪನ್ಯಾಸಕರಿಗೆ ವೇತನ ನೀಡುತ್ತಿದೆ. ಈ ಮೊತ್ತವೇ ತಿಂಗಳಿಗೆ 1 ಕೋಟಿ ರೂಪಾಯಿ ಆಗುತ್ತದೆ. ಹೀಗೆ ಪಾವತಿಸಿದ ಮೊತ್ತವೇ ನಾಲ್ಕು ವರ್ಷದಲ್ಲಿ 35.12 ಕೋಟಿ ರೂ. ಆಗಿದೆ. ಪಿಂಚಣಿ ಸೌಲಭ್ಯಕ್ಕಾಗಿ 107 ಕೋಟಿ ರೂಪಾಯಿ, ವೇತನ ಪಾವತಿಸಲು 40.95 ಕೋಟಿ ರೂಪಾಯಿ, ಯುಜಿಸಿ ವೇತನ ಶ್ರೇಣಿ ಮೊತ್ತ 1.37 ಕೋಟಿ ರೂ. ಸೇರಿ ಒಟ್ಟೂ 185.35 ಕೋಟಿ ರೂ. ಮೊತ್ತವನ್ನು ವಿಶ್ವ ವಿದ್ಯಾಲಯವೇ ಆಂತರಿಕ ಸಂಪನ್ಮೂಲಗಳಿಂದ ನೀಡಿದೆ. ಆದರೀಗ ಧಾರಣಾ ಶಕ್ತಿ ಮುಗಿದಂತೆ ಭಾಸವಾಗುತ್ತಿದೆ. ಸರ್ಕಾರ 185 ಕೋಟಿ ರೂ. ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದೆ. ಈ ಭಾರ ತಡೆದುಕೊಳ್ಳಲಾಗದೆ ವಿಶ್ವವಿದ್ಯಾಲಯ ದಿವಾಳಿ ಅಂಚಿಗೆ ಬಂದು ನಿಂತಿದೆ. ಈ ಭಾಗದ ಅನೇಕ ಘಟಾನುಘಟಿ ನಾಯಕರು ಸದ್ಯ ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿದ್ದರೂ ವಿದ್ಯಾಕಾಶಿ ಸಂಕಷ್ಟಕ್ಕೆ ಎಲ್ಲರೂ ನೆಪ ಹೇಳುವ ಕೆಲಸದಲ್ಲಿ ನಿರತರಾಗಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಕೊಡಬೇಕಾದ ಅನುದಾನ ವನ್ನು ಕೊಟ್ಟೇ ಕೊಡುತ್ತೇವೆ. ಸ್ವಲ್ಪ ತಡವಾ ಗಿರಬಹುದು. ಅನುದಾನ ಬಿಡುಗಡೆ ವಿಳಂಬ ಏಕಾಯಿತು ಎಂಬುದನ್ನೂ ಪರಿಶೀಲಿಸುತ್ತೇವೆ. ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಶಿಸ್ತು ತರಲು ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. | ಡಾ.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ ಕವಿವಿ ರಾಜ್ಯದ ಹಳೆಯ ವಿಶ್ವವಿದ್ಯಾಲಯಗಳಲ್ಲೊಂದು. ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ದುರಂತ. ಸರ್ಕಾರ ಬಾಕಿ ಅನುದಾನ ನೀಡದೇ ಇರುವುದು ಸರಿಯಲ್ಲ. ಸರ್ಕಾರಗಳ ಇಂಥ ಧೋರಣೆಯಿಂದಾಗಿ ವಿಶ್ವವಿದ್ಯಾಲಯಗಳ ಬಾಗಿಲು ಮುಚ್ಚುತ್ತಿವೆ. ಸರ್ಕಾರ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಲಿ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ರ್ಚಚಿಸುವೆ. | ಬಸವರಾಜ ಹೊರಟ್ಟಿ ವಿಪ ಸದಸ್ಯ