

ಬೆಂಗಳೂರು: ಕಾಡುಗೊಂಡನಹಳ್ಳಿ, ದೇವರಜೀವನಹಳ್ಳಿ ಗಲಭೆ ಪ್ರಕರಣದ ಕಿಂಗ್ಪಿನ್ ಸಂಪತ್ ರಾಜ್ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ನಾನಾ ನಾಟಕವಾಡಿದ್ದು, ಊರೂರು ಅಲೆದು ತಲೆಮರೆಸಿಕೊಂಡಿದ್ದು ಈಗಾಗಲೇ ಎಲ್ಲರಿಗೂ ಗೊತ್ತಾಗಿರುವಂಥದ್ದೇ. ಆದರೆ ಇದೀಗ ಅವರು ಬೆಂಗಳೂರಿಗೇ ಬಂದು ಪೊಲೀಸರಿಗೆ ಸಿಕ್ಕಿಬಿದ್ದಿರುವುದು ಕುತೂಹಲ ಮೂಡಿಸಿದೆ.
ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ರಾತ್ರೋರಾತ್ರಿ ಪರಾರಿಯಾಗಿ, ಇಪ್ಪತ್ತೈದು ದಿನಗಳಿಂದ ತಲೆಮರೆಸಿಕೊಂಡಿದ್ದಲ್ಲದೆ, ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂದು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಓಡಾಡಿಕೊಂಡು ಪದೇಪದೆ ಸ್ಥಳ ಬದಲಿಸುತ್ತಲೇ ಇದ್ದ ಸಂಪತ್ ರಾಜ್, ಸೋಮವಾರ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಮರಳಿದ್ದಾರೆ.
ಈ ಮಧ್ಯೆ ಸಂಪತ್ ರಾಜ್ ಪರಾರಿಯಾಗಿ ಮೂರು ವಾರ ಕಳೆದರೂ ಪತ್ತೆಯಾಗದ್ದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಹೈಕೋರ್ಟ್ ಅಸಮಾಧಾನದ ಹಿನ್ನೆಲೆಯಲ್ಲಿ ಸಂಪತ್ ರಾಜ್ ಹುಡುಕಾಟಕ್ಕೆ ಮತ್ತಷ್ಟು ತೀವ್ರ ಪ್ರಯತ್ನ ನಡೆಸಲಾರಂಭಿಸಿದ ಸಿಸಿಬಿ ಪೊಲೀಸರು, ಸಂಪತ್ ರಾಜ್ ಆಪ್ತರು ಹಾಗೂ ಸಂಬಂಧಿಕರ ಮೇಲೆ ಹೆಚ್ಚಿನ ನಿಗಾ ಇರಿಸಿದ್ದರು. ಹೀಗಾಗಿ ನಿನ್ನೆ ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿರೋ ಸ್ನೇಹಿತರ ಮನೆಯಲ್ಲಿ ಸಂಪತ್ ರಾಜ್ ವಾಸ್ತವ್ಯ ಹೂಡಿದ್ದ ಕುರಿತು ಖಚಿತ ಮಾಹಿತಿ ಸಿಕ್ಕ ಬೆನ್ನಿಗೇ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ.