ಕೊನೆಗೂ ಕನಕಪುರಕ್ಕೆ ಮೆಡಿಕಲ್ ಕಾಲೇಜು

medical camp
Published on

* ಸಂಪುಟ ಸಭೆಯ ಅನುಮೋದನೆ

* 300 ಹಾಸಿಗೆ ಕಟ್ಟಡ 550 ಕೋಟಿ ರೂ. ಅನುದಾನ ಡಿ.ಕೆ.ಸಹೋದರರ ದಶಕದ ಕನಸು ನನಸು

ಗಂಗಾಧರ್ ಬೈರಾಪಟ್ಟಣ ರಾಮನಗರ

ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಎನ್ನುವ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಕನಸಿಗೆ ಜೀವ ತುಂಬುವ ಕಾರ್ಯಕ್ಕೆ ಅಧಿಕೃತ ಚಾಲನೆ ದೊರೆತಿದೆ.

ಹೌದು...! ಕಳೆದ ಹಲವಾರು ವರ್ಷಗಳಿಂದಲೂ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎನ್ನುವ ಸಂಬಂಧ ಡಿ.ಕೆ. ಸಹೋದರರು ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದು, ಇದರ ಫಲವಾಗಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ 300 ಹಾಸಿಗೆ ಸಾಮರ್ಥ್ಯದ 550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ.

ನಿರಂತರ ಹೋರಾಟ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಳ್ಳುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಪ್ರಭಾವ ಬಳಸಿದ್ದ ಸಚಿವ ಕೆ. ಸುಧಾಕರ್ ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದರು.

ಈ ವಿಚಾರದಲ್ಲಿ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡರೆ, ಡಿ.ಕೆ.ಶಿವಕುಮಾರ್ ಸಹೋದರರು ಹೋರಾಟದ ಹಾದಿ ಹಿಡಿಯುವ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಮುಖ್ಯಮಂತ್ರಿಗೆ ಪತ್ರವನ್ನೂ ಬರೆದಿದ್ದ ಡಿ.ಕೆ.ಶಿವಕುಮಾರ್, ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಅವರ ನಿರಂತರ ಹೋರಾಟದ ಲವಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಕನಕಪುರಕ್ಕೆ ಮೆಡಿಕಲ್ ಕಾಲೇಜು ಕೊಡುವುದಾಗಿ ೋಷಣೆ ಮಾಡಿದ್ದರು. ಆದರೆ ಇದು ೋಷಣೆಯಾಗಷ್ಟೇ ಉಳಿದಿತ್ತು.

ಸಿದ್ದರಾಮಯ್ಯ ಘೋಷಣೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಡಿ.ಕೆ.ಶಿವಕುಮಾರ್, ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಿದ್ದರಾಮಯ್ಯ ಬಜೆಟ್‌ನಲ್ಲಿಯೇ ಕನಕಪುರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಿಂದಲೇ ವೈಧ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದರು. ಇದು ವಿವಾದದ ಸ್ವರೂಪ ಪಡೆದುಕೊಂಡಿತ್ತು.

ರಾಮನಗರದಲ್ಲಿ ಆದಾಗಲೇ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದರ ಹೊರತಾಗಿ ಜಿಲ್ಲೆಯಲ್ಲಿ ಮತ್ತೊಂದು ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಸಾಧ್ಯವೇ? ಇಲ್ಲ... ರಾಮನಗರದಲ್ಲಿ ತಲೆ ಎತ್ತಬೇಕಿದ್ದ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆಯೇ? ಎನ್ನುವ ಗೊಂದಲ ನಿರ್ಮಾಣಗೊಂಡು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹೋರಾಟಕ್ಕೂ ವೇದಿಕೆ ನಿರ್ಮಾಣಗೊಂಡಿತ್ತು. ನಂತರ ರಾಮನಗರ ಕಾಲೇಜಿಗೂ, ಕನಕಪುರ ಕಾಲೇಜಿಗೂ ಸಂಬಂಧ ಇಲ್ಲ, ಎರಡೂ ಪ್ರತ್ಯೇಕವಾಗಿ ನಿರ್ಮಾಣವಾಗಲಿವೆ ಎನ್ನುವ ಸಂದೇಶ ಸರ್ಕಾರದಿಂದ ಬಂದ ನಂತರ ಎಲ್ಲವೂ ತಣ್ಣಗಾಗಿತ್ತು.

ಗರಿಗೆದರಿದ ಕನಸು

ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಪುಟದಲ್ಲಿ ಅನುಮೋದನೆ ದೊರೆಯುತ್ತಿದ್ದಂತೆ ಈ ಭಾಗದ ಜನರ ಕನಸನ್ನು ನನಸು ಮಾಡುವ ಆಸೆಯನ್ನು ಹುಟ್ಟ್ಟುಹಾಕಿದೆ. ಕನಕಪುರ ಭಾಗದ ಜನ ಮಾತ್ರವಲ್ಲದೆ, ಮೆಡಿಕಲ್ ಕಾಲೇಜು ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ಚಾಮರಾಜನಗರ ಜಿಲ್ಲೆಯ ಹಲವು ಭಾಗದ ಜನತೆ ಹೆಚ್ಚಿನ ಚಿಕಿತ್ಸೆಗೆ ಬೇಕೆಂದರೆ ಮಂಡ್ಯ, ಬೆಂಗಳೂರು, ಮೈಸೂರು ಆಸ್ಪತ್ರೆಗಳನ್ನೇ ಅವಲಂಬಿಸಬೇಕಿತ್ತು. ಆದರೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭದಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಕಾಲೇಜಿನಲ್ಲಿ ಏನಿರಲಿದೆ?

ಕನಕಪುರದ ಹೊಸ ವೈದ್ಯಕೀಯ ಕಾಲೇಜು ಸ್ವಾಯತ್ತವಾಗಿ ಕಾರ್ಯನಿರ್ವಹಿಸಲಿದೆ. ಈ ಕಾಲೇಜಿಗೆ 150 ಎಂಬಿಬಿಎಸ್ ಸೀಟುಗಳ ಮಿತಿ ಇರಲಿದ್ದು, ಕಾಲೇಜಿಗೆ ಬೇಕಾದ ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳು ಮತ್ತಿತರ ಕಾಮಗಾರಿಗಳು ಸೇರಿ 550 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ನಡೆಸಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದಿಂದ ಕನಕಪುರಕ್ಕೆ ಮಾತ್ರವಲ್ಲದೆ ಹಳೇ ಮೈಸೂರು ಭಾಗದ ಹಲವಾರು ಜಿಲ್ಲೆಗಳಿಗೂ ಅನುಕೂಲವಾಗಲಿದೆ.ಸುಧಾಮ್ ದಾಸ್, ವಿಧಾನ ಪರಿಷತ್ ಸದಸ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net