

ಚಿಕ್ಕಬಳ್ಳಾಪುರ: ಆಗ್ನೇಯ ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪರಿಷ್ಕೃತ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ.
2023ನೇ ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿತ್ತು. ಇದರ ನಡುವೆ ಚುನಾವಣಾ ಆಯೋಗದ 2024ನೇ ಮೇ 2ರ ಆದೇಶದಂತೆ ಮತದಾರರ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಿ ಮೇ 16ಕ್ಕೆ ಅಂತಿಮಗೊಳಿಸಿ, ಪರಿಷ್ಕೃತ ಪಟ್ಟಿಯನ್ನು ಸಂಬಂಧಪಟ್ಟ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಮತದಾರ ನೋಂದಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನಿಷೇಧಾಜ್ಞೆ ಜಾರಿ
ಜೂ.3ರಂದು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೆವಾರ್ಷಿಕ ಚುನಾವಣೆ ಹಿನ್ನೆಲೆಯಲ್ಲಿ ಜೂ.1ರ ಸಂಜೆ 5ರಿಂದ ಜೂ.3ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ. ಈ ಅವಧಿಯಲ್ಲಿ ಕಾನೂನು ಬಾಹಿರವಾಗಿ ಗುಂಪುಗೂಡುವುದು, ಮೆರವಣಿಗೆ, ರ‌್ಯಾಲಿ ಕೈಗೊಳ್ಳುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಐದು ಹಾಗೂ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಗುಂಪು ಸೇರುವಂತಿಲ್ಲ. ಘೋಷಣೆ ಕೂಗುವಂತಿಲ್ಲ. ಮತದಾನದ ಮುಕ್ತಾಯಗೊಳ್ಳುವ ಸಮಯದ 48 ಗಂಟೆಗಳ ಅವಧಿಯಲ್ಲಿ ಚುನಾವಣೆಯ ಉದ್ದೇಶಕ್ಕಾಗಿ ಧ್ವನಿವರ್ಧಕ ಬಳಸುವಂತಿಲ್ಲ. ಕಾನೂನು ಮೀರಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನೀತಿಸಂಹಿತೆ ಉಲ್ಲಂಘನೆಗೆ ಕಡಿವಾಣ
ಹಣ, ಉಡುಗೊರೆ, ಮದ್ಯದ ವಿತರಣೆ ತಪ್ಪಿಸಲು ಚುನಾವಣಾ ದಿನದಂದು ಅಭ್ಯರ್ಥಿಗಳು ಚುನಾವಣೆಗಾಗಿ ಅನುಮತಿ ಪಡೆದುಕೊಂಡಿರುವ ವಾಹನ ಮಾತ್ರ ಬಳಕೆ ಮಾಡಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ. ಹಣ, ಉಡುಗೊರೆ, ಮದ್ಯ ವಿತರಣೆ ತಪ್ಪಿಸಲು ಎಲ್ಲ ಖಾಸಗಿ ವಾಹನಗಳನ್ನು ನಿಯಮಾನುಸಾರ ಪರಿಶೀಲಿಸಲಾಗುತ್ತದೆ. ಮದ್ಯದಂಗಡಿ, ಹೋಟೆಲ್ ರೆಸ್ಟೋರೆಂಟ್, ಕ್ಲಬ್‌ಗಳು ಹಾಗೂ ಇತರ ಎಸ್ಟಾಬ್ಲಿಷ್‌ಮೆಂಟ್‌ಗಳು ಮದ್ಯ ಮಾರುವಂತಿಲ್ಲ. ಸ್ವಾಮ್ಯದ ಕ್ಲಬ್‌ಗಳು, ಸ್ಟಾರ್ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮದ್ಯದ ಪೂರೈಕೆಗಾಗಿ ವಿವಿಧ ವರ್ಗಗಳ ಪರವಾನಗಿಗಳನ್ನು ಪಡೆದಿದ್ದರೂ ಸೂಚಿತ ದಿನ ಹಾಗೂ ಸಮಯದಲ್ಲಿ ಮದ್ಯ ಪೂರೈಕೆ ಮಾಡುವಂತಿಲ್ಲ ಎಂದು ತಿಳಿಸಿದೆ.
ಪ್ರಚಾರಕ್ಕೆ ನಿರ್ಬಂಧಗಳು
ಮತದಾನ ನಡೆಯುವ ಎಲ್ಲ ಕ್ಷೇತ್ರಗಳಲ್ಲಿ ಮತದಾನದ ದಿನಕ್ಕಿಂತ 72 ಗಂಟೆಗಳ ಮೊದಲು ಯಾವುದೇ ಸ್ಥಳದಲ್ಲಿ ಬೈಕ್ ರ‌್ಯಾಲಿ ನಡೆಸಲು ಅವಕಾಶ ಇಲ್ಲ. ಮತದಾನ ಕೊನೆಗೊಳ್ಳುವ 48 ಗಂಟೆಗಳ ಹಿಂದಿನ ಅವಧಿಯಲ್ಲಿ ಸಾರ್ವಜನಿಕ ಸಭೆ, ಮೆರವಣಿಗೆ, ಸಂಗೀತ ಕಚೇರಿಗಳು, ರ‌್ಯಾಲಿ ಇಲ್ಲವೇ ಚುನಾವಣಾ ಪ್ರಚಾರಕ್ಕೆ ಅವಕಾಶವಿರುವುದಿಲ್ಲ. ಆದರೆ, ಈ ಅವಧಿಯಲ್ಲಿ ಮನೆ ಮನೆ ಪ್ರಚಾರಕ್ಕೆ ನಿರ್ಬಂಧ ಇರುವುದಿಲ್ಲ. ಆದೇಶದ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧ. ಈ ಆದೇಶವು ಧಾರ್ಮಿಕ ಕಾರ್ಯಗಳು, ಮದುವೆ, ಅಂತ್ಯಕ್ರಿಯೆ ಕಾರ್ಯಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶದಲ್ಲಿ ತಿಳಿಸಿದ್ದಾರೆ.