

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇಂದ್ರ, ಉತ್ತರ, ದಕ್ಷಿಣ ಮತ್ತು ಬೆಂಗಳೂರು ನಗರ ಸೇರಿ 50,78,525 ಪುರುಷರು, 47,63,268 ಮಹಿಳೆಯರು ಮತ್ತು 1,784 ಇತರೆ ಸೇರಿ ಒಟ್ಟು 98,43,577 ಮತದಾರರಿದ್ದಾರೆ.
ಪಟ್ಟಿಗೆ ಹೊಸದಾಗಿ 1,86,487 ಮತದಾರರು ಸೇರ್ಪಡೆಯಾಗಿದ್ದಾರೆ. ಫಾರ್ಮ್-8 ಅರ್ಜಿ ಮೂಲಕ 47,960 ಮಂದಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಎರಡೆರಡು ಕಡೆಗಳಲ್ಲಿ ಇದ್ದ ಕಾರಣಕ್ಕಾಗಿ 1,33,409 ಹೆಸರುಗಳನ್ನು ತೆಗೆದು ಹಾಕಲಾಗಿದೆ. 2023ರ ಜ.5ರ ಪಟ್ಟಿಯಲ್ಲಿ ಒಟ್ಟು 92,09,917 ಮತದಾರರಿದ್ದರು ಎಂದು ಜಿಲ್ಲಾ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮತದಾರರ ನೊಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಮತದಾರರು ತಮ್ಮ ಹೆಸರು, ತಂದೆ ಹೆಸರು, ಸಂಬಂಧ, ಲಿಂಗ, ಜನ್ಮ ದಿನಾಂಕ ವಿಳಾಸ ಮತ್ತು ಭಾವಚಿತ್ರ ಪರಿಶೀಲಿಸಿ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಹೇಳಿದರು. ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್, ಅಪರ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ಹರೀಶ್ ಕುಮಾರ್, ದಯಾನಂದ, ಸ್ನೇಹಲ್, ವಿನೋತ್‌ಪ್ರಿಯಾ ಮತ್ತಿತರರಿದ್ದರು.