

ಬೆಂಗಳೂರು: ಸಾರ್ವಜನಿಕರಿಗೆ ಉಚಿತವಾಗಿ ಸರಬರಾಜು ಮಾಡಬೇಕಿದ್ದ ನೀರನ್ನು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮಾಡಿದ ಖಾಸಗಿ ಟ್ಯಾಂಕರ್ ಮಾಲೀಕ ಸುನೀಲ್ ಎಂಬಾತನ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನೀಲ್ ಎಂಬಾತನಿಗೆ ಸೇರಿದ್ದ ಖಾಸಗಿ ಟ್ಯಾಂಕರ್ನ್ನು ಬಾಡಿಗೆಗೆ ಪಡೆದಿದ್ದ ಬೆಂಗಳೂರು ಜಲಮಂಡಳಿ, ವಾರ್ಡ್ ಸಂ.130ರಲ್ಲಿ ನೀರು ಪೂರೈಸಲು ಸೂಚಿಸಿತ್ತು. ಆದರೇ ಸುನೀಲ್, ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಮಲ್ಲಸಂದ್ರ ವಾರ್ಡ್ ಸಂ.14ರಲ್ಲಿ ಭಾನುವಾರು ವಾಣಿಜ್ಯ ಉದ್ದೇಶಕ್ಕೆ ನೀರು ವಿತರಿಸಿದ್ದ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ ಸಹಾಯಕ ಇಂಜನಿಯರ್ ಕಾರ್ತಿಕ್ ಮಂಜು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ಜಲಮಂಡಳಿ ಹಾಗೂ ಬಿಬಿಪಿಎಂಪಿ ವತಿಯಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಖಾಸಗಿ ಟ್ಯಾಂಕರ್ಗಳನ್ನು ಪಡೆದುಕೊಳ್ಳಲಾಗಿದೆ. ಅವರು ಜಲಮಂಡಳಿ ಸೂಚಿಸಿದ ಸ್ಥಳಗಳಿಗೆ ನೀರು ಸರಬರಾಜು ಮಾಡಬೇಕು. ಒಂದು ವೇಳೆ ಅನ್ಯ ಉದ್ದೇಶಗಳಿಗೆ ಮಾರಾಟ ಮಾಡಿದರೆ ಮಂಡಳಿಯಿಂದ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.