ಸಿದ್ದು ಬರಲಿ, ಬಿಡಲಿ ಹೋರಾಟ ನಡೆಯುತ್ತೆ

State collage
Published on

ರಾಯಚೂರು: ಕುರುಬ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸುವ ಹೋರಾಟ ಸಂಬಂಧವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆದುಕೊಳ್ಳುತ್ತಿರುವ ರೀತಿಗೆ ರಾಜ್ಯ ಕುರುಬರ ಎಸ್​ಟಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಿಂದೆ ಹೋರಾಟ ಬೆಂಬಲಿಸಿದ್ದರು. ಈಗ ಆರ್​ಎಸ್​ಎಸ್ ಕೈವಾಡವಿದೆ ಎನ್ನುತ್ತಿದ್ದಾರೆ. ಹಾಗಾದರೆ ಸಮುದಾಯದ ಸ್ವಾಮೀಜಿಗಳು ಆರ್​ಎಸ್​ಎಸ್​ನವರೆ ಎಂಬುವುದಕ್ಕೆ ಉತ್ತರ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೋರಾಟಕ್ಕೆ ತಮ್ಮನ್ನು ಕರೆದಿಲ್ಲ ಎಂದು ಹೇಳುತ್ತಿರುವ ಅವರು ಈ ಹಿಂದೆಯೇ ಯಾಕೆ ಹೋರಾಟ ಮಾಡಲಿಲ್ಲ. ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಸಿಗಬೇಕಾ? ಬೇಡವಾ? ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು. ಅವರು ನಮ್ಮ ಸಮುದಾಯದ ಪ್ರಭಾವಿ ನಾಯಕರು. ಆದರೆ, ಹೋರಾಟಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಏಕೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಕುರುಬ ಸಮುದಾಯ ವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಪಕ್ಷಾತೀತ ಹೋರಾಟ ನಡೆಸಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹೋರಾಟ ಸಮಿತಿಯಲ್ಲಿದ್ದಾರೆ. ಸಿದ್ದರಾಮಯ್ಯ ಪಾಲ್ಗೊಳ್ಳಲಿ, ಬಿಡಲಿ ಹೋರಾಟ ಮುಂದುವರಿಯಲಿದೆ.

| ಕೆ.ವಿರೂಪಾಕ್ಷಪ್ಪ ರಾಜ್ಯ ಕುರುಬರ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ

ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕೇವಲ ಶಿಫಾರಸು ಮಾಡಿದರೆ ಸಾಕು. ಹೋರಾಟದ ಅಗತ್ಯ ಏನಿದೆ? ಕುರುಬ ಸಮುದಾಯ ಒಡೆಯುವ ಹುನ್ನಾರ, ನನ್ನನ್ನು ರಾಜಕೀಯವಾಗಿ ವೀಕ್ ಮಾಡುವ ಉದ್ದೇಶವಿದು. ಈಶ್ವರಪ್ಪ- ವಿಶ್ವನಾಥ್ ಹುಟ್ಟುಹಾಕಿರುವ ಹೋರಾಟದ ಹಿಂದೆ ಆರ್​ಎಸ್​ಎಸ್ ಕುತಂತ್ರವಿದ್ದು, ಸ್ವಾಮೀಜಿ ಹಾಗೂ ಹೋರಾಟ ನಡೆಸುತ್ತಿರುವ ಸಮುದಾಯದ ನಾಯಕರು ಎಚ್ಚರಿಕೆಯಿಂದ ಇರಬೇಕು.

| ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net