ಕೆಲಸ ಸರಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಕ್ಕೆ ಕೊಲೆ! ಜೆಪಿ ನಗರದ ಪಬ್​ನಲ್ಲಿ ಭೀಕರ ಕೃತ್ಯ

jp nagar
Published on

ಬೆಂಗಳೂರು: ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದನೆಂಬ ಸಿಟ್ಟಿಗೆ ವ್ಯಕ್ತಿಯೊಬ್ಬ ತನ್ನೊಂದಿಗೆ ಕೆಲಸ ಮಾಡುತ್ತಿದ್ದವನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಜೆಪಿ ನಗರದಲ್ಲಿರುವ 55 ವಾಲ್ಸ್ಟ್ರೀಟ್ ಪಬ್​ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸಾಗರ್​(22) ಕೊಲೆಯಾದ ಯುವಕ. ಅದೇ ಪಬ್​ನಲ್ಲಿ ತ್ರಿಪುರ ಮೂಲದ ಮೌಸಿಕ್ ಹೆಸರಿನ ಯುವಕ ಕೆಲಸ ಮಾಡುತ್ತಿದ್ದ. ಇವರಿಬ್ಬರು ಸಹಾಯಕ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ಶನಿವಾರದಂದು ಈ ಇಬ್ಬರ ನಡುವೆ ಜಗಳವಾಗಿದೆ. ನೀನು ಸರಿಯಾಗಿ ಕೆಲಸ ಮಾಡುವುದಿಲ್ಲವೆಂದು ಸಾಗರ್​, ಮೌಸಿಕ್​ ಬಗ್ಗೆ ಆರೋಪ ವ್ಯಕ್ತಪಡಿಸಿದ್ದಾನೆ. ಸಿಟ್ಟಿನಿಂದ ಒಂದೇಟನ್ನೂ ಹೊಡೆದಿದ್ದ.

ಹೊಡೆತ ತಿಂದ ಸಿಟ್ಟಿನಿಂದಾಗಿ ಮೌಸಿಕ್​ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ. ರಾತ್ರಿ 9.30ರ ಸಮಯಕ್ಕೆ ಕಿಚನ್​ನಲ್ಲಿದ್ದ ಚಾಕು ತಂದು ಸಾಗರ್​ಗೆ ಚುಚ್ಚಿದ್ದಾನೆ. ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಸಾಗರ್​ಗೆ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. ಈ ಬಗ್ಗೆ ಜೆಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net