ಶೋಷಣೆ ನಿಲ್ಲದಿದ್ದರೆ ಉಗ್ರ ಹೋರಾಟ

14-02-rama-Swabhimani
Published on

ರಾಮನಗರ: ದಲಿತರ ನೋವು ನಲಿವುಗಳನ್ನು ಆಲಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ದಲಿತರನ್ನು ಜಿಲ್ಲಾಢಳಿತ ನಡೆಸಿಕೊಳ್ಳುತ್ತಿರುವ ವರ್ತನೆಯಿಂದ ಬೇಸತ್ತು ಸ್ವಾಭಿಮಾನದ ಭೀಮೋತ್ಸವ ನಡೆಸಿದ್ದೇವೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅದ್ಯಕ್ಷ ಶಿವಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಪ್ರತಿಯಾಗಿ ಜಿಲ್ಲೆಯ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಭಿಮಾನದ ಭೀಮೋತ್ಸವದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದೇ ಪದೇ ದಲಿತರನ್ನು, ರೈತರನ್ನು, ಹೋರಾಟಗಾರರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿರುವ ಜಿಲ್ಲಾಧಿಕಾರಿ ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಚಳವಳಿಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಜಾತಿ ವಿನಾಶವಾಗಬೇಕು ಎನ್ನುವುದು ಅಂಬೇಡ್ಕರ್ ಕನಸು. ಆದರೆ ಸರ್ಕಾರಗಳು ಜಾತಿ ಜನಗಣತಿ, ಒಳ ಮೀಸಲಾತಿ ಎನ್ನುವ ಮೂಲಕ ಜಾತೀಯತೆಯನ್ನು ಪ್ರತಿಪಾದಿಸುತ್ತಿವೆ. ರಾಜ್ಯದಲ್ಲಿ ಒಂದು ಕೋಟಿಯಷ್ಟು ದಲಿತ ಸಮುದಾಯದವಿದ್ದರೂ ದಲಿತರೊಬ್ಬರು ಮುಖ್ಯಮಂತ್ರಿಯಾಗಲು ಈವರೆವಿಗೂ ಸಾಧ್ಯವಾಗಿಲ್ಲ ಎಂದು ಬೇಸರಿದರು.

ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚಿಸದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ, ದೇವೇಗೌಡರು ಪ್ರಧಾನಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಜಿಲ್ಲಾಧಿಕಾರಿ ವಿರುದ್ದ ಎಲ್ಲಾ ಸಂಘಟನೆಗಳು ಸೇರಿ ಸಮನ್ವಯತೆಯಿಂದ ಹೋರಾಟ ಮಾಡಬೇಕು ಎಂದು ತಿಳಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ, ವಿಶ್ವಕ್ಕೆ ಮಾದರಿಯಾದ ಸಂವಿಧಾನ ನೀಡಿರುವ ಅಂಬೇಡ್ಕರ್ ಅವರಿಗೆ ಮರಣೋತ್ತರ ನೊಬೆಲ್ ಪ್ರಶಸ್ತಿ ನೀಡಬೇಕು. ಹೋರಾಟಗಾರರನ್ನು ಸರ್ಕಾರದ ಜೊತೆಗೆ ಜಿಲ್ಲಾಧಿಕಾರಿಯೂ ಸೇರಿಕೊಂಡು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಪ್ರತಿಭಟನೆಯ ಹಕ್ಕನ್ನು ಕಿತ್ತುಕೊಂಡಿರುವ ಜಿಲ್ಲಾಧಿಕಾರಿ ವಿರುದ್ಧ ಸಂಘಟಿತ ಹೋರಾಟದ ಅವಶ್ಯಕತೆ ಇದೆ ಎಂದರು.

ಬಿಜೆಪಿ ಮುಖಂಡ ಗೌತಮ್ ಗೌಡ, ದಲಿತ ಮುಖಂಡ ಮತ್ತಿಕೆರೆ ಹನುಮಂತಯ್ಯ, ದಲಿತ ಮುಖಂಡ ಜೆ.ಎಂ. ಶಿವಲಿಂಗಯ್ಯ, ಹಿರಿಯ ಮುಖಂಡ ಪಟ್ಲು ಗೋವಿಂದರಾಜು, ಬಿವಿಎಸ್ ಮುಖಂಡ ಹರೀಶ್ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಹರಿಹಾಯ್ದರು.

ಸ್ವಾಭಿಮಾನದ ಭೀಮೋತ್ಸವದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ವಕ್ತಾರ ಬಿ. ಉಮೇಶ್, ಸೋಮಶೇಖರ್, ಎ. ರವಿ, ವಿವಿಧ ಸಂಘಟನೆಗಳ ಮುಖಂಡರಾದ ಹರೀಶ್ ಬಾಲು, ಅಂಜನಾಪುರ ವಾಸು, ಕೊತ್ತೀಪುರ ಗೋವಿಂದರಾಜು, ಕೂಡ್ಲೂರು ವಿನಯ್, ಪುನೀತ್ ರಾಜ್, ಶಂಕರ್, ಪರಮೇಶ್, ಗೋಪಿ, ಮಹೇಶ್, ಪ್ರಸಾದ್, ಕೃಷ್ಣಮೂರ್ತಿ, ಸುರೇಶ್, ಅಪ್ಪಾಜಿ, ನಂಜುಂಡ, ದಿನೇಶ್, ಲೋಕೇಶ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net