

ಚನ್ನಪಟ್ಟಣ : ಮಹಿಳೆಯರೇ ಅಭಿನಯಿಸಿದ ‘ಶ್ರೀ ಶಿವಶಕ್ತಿ ಲೀಲೆ ಅಥವಾ ದಕ್ಷ ಯಜ್ಞ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ನಗರದ ಕೊಲ್ಲಾಪುರದಮ್ಮನ ದೇವಸ್ಥಾನ ಆವರಣದ ಡಾ.ರಾಜ್ ಬಯಲು ರಂಗಮಂದಿರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಅರವಿಂದವಲ್ಲಿ ಸಾಂಸ್ಕೃತಿಕ ಕಲಾ ಟ್ರಸ್ಟ್‌ನಿಂದ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ತಾಲೂಕಿನ ಗೃಹಿಣಿಯರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಅಭಿನಯಿಸಿದ ಈ ನಾಟಕವನ್ನು ಸಾವಿರಾರು ಮಂದಿ ಕಲಾಭಿಮಾನಿಗಳು ಕಣ್ತುಂಬಿಕೊಂಡರು. ಕಳೆದ ವರ್ಷದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾವಿಪ ನೇತೃತ್ವದಲ್ಲಿ ಮಹಿಳೆಯರು ಕುರುಕ್ಷೇತ್ರ ನಾಟಕ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದರು.
ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ಹಾಗೂ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಪ್ರಸುತ್ತ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ, ಚನ್ನಪಟ್ಟಣದಲ್ಲಿ ಎರಡನೇ ಬಾರಿಗೆ ಮಹಿಳೆಯರೇ ಸೇರಿ ಪೌರಾಣಿಕ ನಾಟಕ ಅಭ್ಯಸಿಸಿ ಪ್ರದರ್ಶನ ನಡೆಸಿಕೊಡುತ್ತಿರುವ ಶ್ಲಾಘನೀಯ ಎಂದರು.
ಮಹಿಳೆಯರು ಕುಟುಂಬದ ನಿರ್ವಹಣೆ, ಅಡುಗೆ ಮನೆ ಹಾಗೂ ಮಕ್ಕಳ ಪಾಲನೆಗೆ ಮಾತ್ರ ಸೀಮಿತ ಎಂಬ ಭಾವನೆ ಹಾಗೂ ಅವರ ಮೇಲಿದ್ದ ಅಗೌರವ ಎನ್ನುವುದು ಇಂದು ಕಾಣೆಯಾಗಿ ಮನೆಯ ಒಡತಿಯಾದ ಮಹಿಳೆಯರ ಬಗ್ಗೆ ಗೌರವ ಹಾಗೂ ಪ್ರೀತಿ ಹೆಚ್ಚಾಗುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದರು.
ಕಲೆ ಎಂದರೆ ಅದು ಕೇವಲ ಪುರುಷರ ಆಸ್ತಿಯಲ್ಲ ಎನ್ನುವುದನ್ನು ಬಹಳ ಹಿಂದೆಯೇ ನಮ್ಮ ಸಿನಿಮಾ ರಂಗದಲ್ಲಿ ಹಾಗೂ ಬೀದಿ ನಾಟಕಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಮಹಿಳೆಯರು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಡಾ.ತೇಜಸ್ವಿನಿ ಹಾಗೂ ಭಾವಿಪ ದಕ್ಷಿಣ ಪ್ರಾಂತ್ಯ ಸಂಘಟನ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ಜಯಲಕ್ಚ್ಮಿ ನಂಜಪ್ಪ, ರಂಗಭೂಮಿ ಕಲಾವಿದ ಸಿ.ಗೋಪಾಲ್, ಭಾವಿಪ ದಕ್ಷಿಣ ಭಾರತ ವಿಭಾಗೀಯ ಜಂಟಿ ಕಾರ್ಯದರ್ಶಿ ಅರುಣ್ ಜಿ.ಘಾಟಗೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುನೀಲ್ ಕುಮಾರ್ ಇದ್ದರು.