ಪ್ರಯಾಣ ದರ ಏರಿಕೆ ಅನಿವಾರ್ಯ

mmm
Published on

ಮಾಗಡಿ  : ಬಿಜೆಪಿ ಸರ್ಕಾರ ಇದ್ದಾಗ ಸಾರಿಗೆ ವ್ಯವಸ್ಥೆಗೆಂದೇ ಸಾಕಷ್ಟು ಸಾಲ ಮಾಡಿತ್ತು. ಪ್ರಯಾಣ ದರ ಏರಿಕೆ ಮಾಡಿರಲಿಲ್ಲ. ಆದರೆ, ಪ್ರತಿ 5 ವರ್ಷಕ್ಕೊಮ್ಮೆ ಪರಿಷ್ಕರಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ದರ ಏರಿಕೆ ಮಾಡಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಪಟ್ಟಣದ ಸಿದ್ದರೂಢ ಆಶ್ರಮದಲ್ಲಿ ಕುರುಹಿನ ಶೆಟ್ಟಿ ಸಮುದಾಯ ಏರ್ಪಡಿಸಿದ್ದ ಶ್ರೀನಿರ್ವಾಣಿ ಭಗವತಿ ಮತ್ತು ನಗರ ದೇವತೆ ಅಣ್ಣಮ್ಮ ದೇವಿಯ ಆರಾಧನಾ ಮಹೋತ್ಸವದಲ್ಲಿ ಮಾತನಾಡಿ, ಯಾರಿಗೂ ಹೊರೆಯಾಗದಂತೆ ದರ ಏರಿಕೆ ಮಾಡಲಾಗಿದೆ. ಸರ್ಕಾರ ನುಡಿದಂತೆ ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸಿದೆ. ಸಾರಿಗೆ ಸಂಸ್ಥೆ ನಷ್ಟದಲ್ಲಿಲ್ಲ. ದರ ಏರಿಕೆ ವಿಚಾರವಾಗಿ ಪ್ರತಿ ಪಕ್ಷದವರಿಗೆ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಬಸ್ ಖರೀದಿ ಮಾಡಬೇಕಾಗಿದ್ದು, ಇದರಿಂದ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸ್ವಷ್ಪಡಿಸಿದರು.

ಗ್ಯಾರಂಟಿ ನಿಲ್ಲಿಸುವುದಿಲ್ಲ!: ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೆ ಇಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿಯೂ ನಮ್ಮ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಇದನ್ನು ನೋಡಿದರೆ ಗ್ಯಾರಂಟಿಗಳು ಕೈ ಹಿಡಿದಿದೆ. ಇದರಿಂದ ಪ್ರತಿ ಪಕ್ಷದವರಿಗೆ ತಡೆದುಕೊಳ್ಳಲು ಆಗದೆ ಪ್ರತಿ ನಿತ್ಯ ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡುತ್ತಾ ಪ್ರಚಾರಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದರಿಂದ ಪಕ್ಷವನ್ನು ಸರ್ಕಾರವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ರೇವಣ್ಣ ಲೇವಡಿ ಮಾಡಿದರು.

ಶಾಸಕರ ಕೈಯಲ್ಲಿದೆ ದೇಗುಲ ಉಳಿವು: ಪಟ್ಟಣದ ಕಲ್ಯಾಗೇಟ್ ಶ್ರೀ ವರಸಿದ್ದಿ ವಿನಾಯಕ ದೇವಾಲಯವನ್ನು ಶಾಸಕರು ಮನಸ್ಸು ಮಾಡಿದರೆ ಉಳಿಸಬಹುದು ಎಂದು ರೇವಣ್ಣ ಹೇಳಿದರು.

ಬೆಂಗಳೂರು- ಮಾಗಡಿ ಕೆಶಿಪ್ ರಸ್ತೆ ಕಾಮಗಾರಿಯಿಂದ ಕಲ್ಯಾಗೇಟ್ ವರಸಿದ್ದಿ ವಿನಾಯಕ ದೇವಾಲಯ ತೆರವುಗೊಳಿಸುವಂತಾಗಿದೆ. ಆದರೆ, ಭಕ್ತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನಾತ್ಮಕವಾಗಿ ದೇವಾಲಯ ಉಳಿಸಿ, ರಸ್ತೆ ಮಾಡುವ ಅವಕಾಶವಿದೆ. ಅದನ್ನು ಶಾಸಕರು ಮಾಡಬಹುದು ಎಂದರು.

ಈ ಹಿಂದೆ ಇದ್ದ ಯೋಜನೆ ಬಗ್ಗೆ ಚರ್ಚಿಸಲು ನಾನು ಮತ್ತು ಮಾಜಿ ಶಾಸಕ ಎ.ಮಂಜು ಸಭೆ ಕರೆದಿದ್ದು ನಿಜ. ಅಂದು ಸಹ ನಾವು ದೇವಾಲಯದ ಉಳಿವಿನ ಬಗ್ಗೆ ಚರ್ಚಿಸಿದ್ದೇವೆ. ಬೇರೆ ಯೋಜನೆಯನ್ನು ರೂಪಿಸಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಕೆಶಿಪ್ ರಸ್ತೆ ಯೋಜನೆ ಮಂಜೂರಾತಿಯಾಗಿದೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿಯೇ ಅನುದಾನ ಬಿಡುಗಡೆಯಾಗಿದೆ. ಹಿಂದಿನ ನೀಲಿನಕ್ಷೆಯೇ ಇದೆ. ನಾವು ಬದಲಾಯಿಸಿಲ್ಲ. ಆದರೆ, ನನ್ನ ಹೆಸರನ್ನು ಶಾಸಕರು ಪ್ರಸ್ತಾಪಿಸುವುದು ಸರಿಯಲ್ಲ. ಶಾಸಕರಿಗೆ ಕ್ಷೇತ್ರದಲ್ಲಿ ಸರ್ವಾಧಿಕಾರ ಇದೆ. ಆದ್ದರಿಂದ ಈ ಬಗ್ಗೆ ಕಾನೂನಾತ್ಮಕವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ದೇವಾಲಯ ಉಳಿವಿಗೆ ಮುಂದಾಗಲಿ ಎಂದರು.

ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಎಚ್.ಎನ್. ಅಶೋಕ್ ಮಾತನಾಡಿ, ನಾಡಿನ ಒಳಿತಿಗಾಗಿ ಅರಾಧನಾ ಮಹೋತ್ಸ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಭಾನುವಾರ ನಗರ ದೇವತೆ ಅಣ್ಣಮ್ಮ ದೇವಿ ಮತ್ತು ನಿರ್ವಾಣಿ ಭಗವತಿ ದೇವಿಯನ್ನು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಮಾಜಿ ಶಾಸಕ ಎ.ಮಂಜುನಾಥ್, ಪುರಸಭಾಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಸದಸ್ಯರಾದ ಎಂ.ಎನ್. ಮಂಜುನಾಥ್, ರೇಖಾ ನವೀನ್,ಮಾಜಿ ಉಪಾಧ್ಯಕ್ಷ ಎಂ. ನಾಗೇಂದ್ರ, ಕಂದಂಬ ಗಂಗರಾಜು, ಕೃಷ್ಣ, ಲಕ್ಷ್ಮೀಕಾಂತ್, ವೃಂದಪ್ಪ, ಬಾಬು, ಮಂಜುನಾಥ್, ಚಿದಾನಂದ್, ಆನಂದ್, ಶಾರದ, ಸೋಮಶೇಖರ್, ದಿವ್ಯಾ ಗೋಪಿನಾಥ್, ಗೀತಾ ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net