ಸರ್ಕಾರಿ ಬಸ್​ಗಳ ಕೊರತೆಯಿಂದ ಕರ್ನಾಟಕ-ಆಂಧ್ರ ಗಡಿಯಲ್ಲಿ ಜನರ ಪರದಾಟ: ಹೆಚ್ಚುವರಿ ಬಸ್​ ಸೇವೆಗೆ ಮನವಿ! Govt Bus

Govt Bus
Published on

Govt Bus : ಕರ್ನಾಟಕದ ಬೆಂಗಳೂರಿನಿಂದ ಆಂಧ್ರಪ್ರದೇಶದ ಕಡಪಾ ಹಾಗೂ ತಿರುಪತಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಜನರು ನಿತ್ಯವೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ಗಮನವಹಿಸಲಿ ಎಂದು ಜನರು ಒತ್ತಾಯಿಸಿದ್ದಾರೆ.

ಆಂಧ್ರ ಪ್ರದೇಶದ ಕಡಪಾದಲ್ಲಿ ಹಾಗೂ ತಿರುಪತಿಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಶ್ರೀಕ್ಷೇತ್ರ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಲು ಜನರಿಗೆ ಕಡಪಾ ಅಥವಾ ತಿರುಪತಿ ಬಸ್ ಅವಶ್ಯಕತೆ ಇದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳನ್ನು ಕಡಪಾ, ತಿರುಪತಿ ಹಾಗೂ ಬೆಂಗಳೂರು ಮಧ್ಯೆ ಅವಶ್ಯಕತೆಗೆ ತಕ್ಕಂತೆ ಬಿಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಹಾಗೂ ಗಡಿಯಿಂದಾಚೆಗೆ ತೆರಳುವ ಕನ್ನಡಿಗರಿಗೆ ಉತ್ತಮ ಸೇವೆ ಒದಗಿಸಲು ಸರ್ಕಾರ ಬಸ್ ಸೇವೆ ಒದಗಿಸಲು ಜನರು ಒತ್ತಾಯ ಮಾಡಿದ್ದಾರೆ.

ಅಂದಹಾಗೆ ಕರ್ನಾಟಕ ಮತ್ತು ಆಂಧ್ರದ ಗಡಿಯಿಂದ ಬೆಂಗಳೂರಿನಿಂದ ಚಿಂತಾಮಣಿ, ಮದನಪಲ್ಲಿ, ರಾಯಚೋಟಿ, ಕಡಪ ಹಾಗೂ ತಿರುಪತಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸುಗಳು ತೀರಾ ಕಡಿಮೆ ಇದೆ. ಅಲ್ಲದೆ, ಕೆಎಸ್​ಆರ್​ಟಿಸಿ ನಿಯಮಿತ ಸೇವೆಗೆ ದಿನನಿತ್ಯ ಮತ್ತು ವಾರಾಂತ್ಯ ಹಾಗೂ ಹಬ್ಬ ಹರಿದಿನಗಳಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿ ಪ್ರತಿ ಅರ್ಧಗಂಟೆಗೆ ಒಂದು ಕೆಎಸ್​ಆರ್​ಟಿಸಿ ಬಸ್ ಅನ್ನು​ ನಿಯಮಿತ ಸೇವೆಗಾಗಿ ಬಿಡಬೇಕೆಂದು ಜನರು ಆಗ್ರಹಿಸಿದ್ದಾರೆ.

ರಾಮಸಮುದ್ರದಿಂದ ಬೆಂಗಳೂರಿಗೆ ಕೋಲಾರ, ಕೆಜಿಎಫ್, ಮುಳಬಾಗಲು ಮೂಲಕ ಬೆಂಗಳೂರು ಮತ್ತು ಪುಂಗನೂರಿನಿಂದ ಕೆಜಿಎಫ್, ಕೋಟಿಲಿಂಗ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ, ಎಪಿಎಸ್‌ಆರ್‌ಟಿಸಿ ಬಸ್‌ಗಳಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ಮುಂಜಾನೆ 5 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಬಸ್​ ಸೇವೆ ಒದಗಿಸುವಂತೆ ಜನರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇನ್ನು ಸರ್ಕಾರಿ ಬಸ್​ಗಳ ಕೊರೆತ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್​ಗಳು ಹೆಚ್ಚಿನ ಲಾಭಕ್ಕಾಗಿ ಪ್ರಯಾಣಿಕರ ಪ್ರಾಣವನ್ನೇ ಲೆಕ್ಕಿಸದೇ ದನಗಳಂತೆ ತುಂಬಿಕೊಂಡು ಹೋಗುತ್ತಿದ್ದಾರೆ. ಕೆಲವು ಬಸ್​ಗಳಲ್ಲಿ ಪ್ರಯಾಣಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಸ್ಸಿನ ಟಾಪ್​ ಮೇಲೆ ಕುಳಿತು ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಚಿಕ್ಕಬಳಾಪುರ ವಿಭಾಗದಿಂದ ಚಿಂತಾಮಣಿ, ಮದನಪಲ್ಲಿ, ಕಡಪ ಮಾರ್ಗವಾಗಿ ಮತ್ತು ಕರ್ನಾಟಕ ಮತ್ತು ಆಂಧ್ರ ಗಡಿಗಳಿಂದ ಅಂತಾರಾಜ್ಯ ಪರವಾನಿಗೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬಸ್​ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ. ಸುರಕ್ಷಿತ ಪ್ರಯಾಣಕ್ಕಾಗಿ ಜನರಿಗೆ ಅಗತ್ಯವಿರುವಷ್ಟು ಬಸ್​ಗಳನ್ನು ಬಿಡಬೇಕೆಂದು ಜನರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net