ನಿಗದಿ ಪಡಿಸಿದ ದಿನಾಂಕದಂತೆ ಉತ್ಸವ ಆಚರಣೆ

ಗಂಗಾಧರಸ್ವಾಮಿ ಕಲುಬಾಗಿಲಮಠ
ಗಂಗಾಧರಸ್ವಾಮಿ ಕಲುಬಾಗಿಲಮಠ
Published on

ಕನಕಗಿರಿ: ಜಾತ್ರೆಯಲ್ಲಿ ಧಾರ್ಮಿಕ ಆಚರಣೆಗೆ ಹಾಗೂ ಭಕ್ತರಿಗೆ ತೊಂದರೆ ಆಗದಂತೆ ಸಾರ್ವಜನಿಕರ ಸೂಚನೆ, ಸಹಕಾರದೊಂದಿಗೆ ನಿಗದಿ ಪಡಿಸಿದಂತೆ ಮಾ.20, 21ರಂದು ಕನಕಗಿರಿ ಉತ್ಸವ ಆಚರಿಸಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಹೇಳಿದರು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನಕಗಿರಿ ಹಿತರಕ್ಷಣಾ ಸಮಿತಿಯಿಂದ ಮಂಗಳವಾರ ಉತ್ಸವದ ದಿನಾಂಕ ಮುಂದೂಡುವಂತೆ ಮನವಿ ಸಲ್ಲಿಸಲಾಗಿದೆ. ಉತ್ಸವ ಆಚರಣೆ ಬೇಡವೆಂದಿಲ್ಲ ಬದಲಾಗಿ ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ. ಜಾತ್ರೆ ಜತೆ ಉತ್ಸವ ಆಚರಿಸಿದರೆ ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸಲು ತೊಂದರೆ ಆಗಲಿದೆ ಎಂದು ಮನವಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಉತ್ಸವ ಆಚರಣೆಗೆ ಜಿಲ್ಲಾಡಳಿತವೇ ಇಲ್ಲಿ ನೆಲೆಯೂರಲಿದೆ. ಆದ್ದರಿಂದ ಜಾತ್ರೆಗೆ ಬರುವ ಭಕ್ತರಿಗೆ ವ್ಯವಸ್ಥೆಯ ಕೊರೆತಯಾಗದಂತೆ ಅಧಿಕಾರಿಗಳು ಮುತವರ್ಜಿವಹಿಸಲಿದ್ದಾರೆ. ಅಲ್ಲದೇ ಧಾರ್ಮಿಕ ಆಚರಣೆಗಳ ಜತೆಗೆ ಬಿಡುವಿನ ಸಮಯದಲ್ಲಿ ಉತ್ಸವ ಆಚರಿಸಲಾಗುವುದು. ಜಾತ್ರೆಗೆ ಬಂದವರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮನರಂಜನೆ ದೊರೆಯಲಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಮಾತನಾಡಿ, ಉತ್ಸವದ ದಿನಾಂಕ ಮುಂದೂಡುವಂತೆ ಮನವಿ ಸಲ್ಲಿಸಿದ ಮುಖಂಡರೊಂದಿಗೆ ಚರ್ಚಿಸಿ ಸಲಹೆ, ಸಹಕಾರ ನೀಡುವಂತೆ ಕೋರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಗದಿ ಪಡಿಸಿದ ದಿನದಂದು ಉತ್ಸವ ನಡೆಸಲಾಗುವುದು ಎಂದರು.

ವಕ್ತಾರ ಶರಣಪ್ಪ ಭತ್ತದ್, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ರಾಜಾಸಾಬ್ ನಂದಾಪುರ, ಅನಿಲ್‌ಕುಮಾರ ಬಿಜ್ಜಳ, ಪ್ರಮುಖರಾದ ವಿರೂಪಾಕ್ಷಿ ಆಂಧ್ರ, ನೀಲಕಂಠ ಬಡಿಗೇರ, ಪಾಮಣ್ಣ ಅರಳಿಗನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net