- ಕಾರ್ಯಕ್ರಮಗಳು ಅಚ್ಚುಕಟ್ಟಾಗಿರಲಿ
- ಅಧಿಕಾರಿಗಳಿಗೆ ಸಚಿವ ತಂಗಡಗಿ ಸೂಚನೆ
ಕೊಪ್ಪಳ: ಕನಕಗಿರಿ ಉತ್ಸವವನ್ನು ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಆಚರಿಸಬೇಕು. ಅನುದಾನದ ಕೊರತೆ ಇಲ್ಲ. ಯಾವುದೇ ಕೊರತೆ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನಕಗಿರಿ ಉತ್ಸವ ಅಂಗವಾಗಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಸದನ ಹಾಗೂ ವಿವಿಧ ಜಯಂತಿಗಳ ಕಾರಣ ನಾನು ಪದೇ ಪದೆ ಕೊಪ್ಪಳಕ್ಕೆ ಬರಲಾಗುವುದಿಲ್ಲ. ಡಿಸಿ, ಜಿಪಂ ಸಿಇಒ ಹಾಗೂ ಎಸ್ಪಿ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿಗಳು ನಿಮಗೆ ವಹಿಸಿದ ಕರ್ತವ್ಯ ಜವಾಬ್ದಾರಿಯಿಂದ ನಿಭಾಯಿಸಿ.
ಯಾವುದೇ ಗೊಂದಲಗಳಾಗದಿರಲಿ. ಹೊರಗಿನ ಕಲಾವಿದರ ಜತೆಗೆ ಸ್ಥಳಿಯ ಕಲಾವಿದರಿಗೆ ಆದ್ಯತೆ ನೀಡಿ. ರಥ ಬೀದಿಯಲ್ಲಿ ಮೆರವಣಿಗೆ ಅದ್ದೂರಿಯಾಗಿರಬೇಕು. ಕನಕಗಿರಿ ಪಟ್ಟಣ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಬೇಕು. ಲ&ಪುಷ್ಪ ಪ್ರದರ್ಶನ ಆಕರ್ಷಕವಾಗಿರಲಿ. ವಿವಿಧ ಇಲಾಖೆಗಳ ಮಳಿಗೆಗಳು ವಿಭಿನ್ನವಾಗಿರಲಿ. ಉತ್ತಮ ಮೂರು ಮಳಿಗೆಗಳಿಗೆ ಪ್ರಶಸ್ತಿ ನೀಡಲಾಗುವುದು. ರಸ್ತೆ ದುರಸ್ಥಿ, ಸ್ವಚ್ಛತೆ ಕೆಲಸ ಬೇಗ ಮುಗಿಸಿ. 24*7 ಕುಡಿವ ನೀರಿನ ವ್ಯವಸ್ಥೆ ಮಾಡಿ. ಸಾರ್ವಜನಿಕರಿಗೂ ಊಟದ ವ್ಯವಸ್ಥೆ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಫೆ.27ರಿಂದ ಕ್ರೀಡಾಕೂಟ : ದ್ವೀತಿಯ ಪಿಯು ಪರೀಕ್ಷೆ ಕಾರಣ ಕ್ರೀಡಾಕೂಟಗಳನ್ನು ಉತ್ಸವಕ್ಕಿಂತ ಮುಂಚಿತವಾಗಿ ಆಯೋಜಿಸಿ. ಫೆ.27ರಂದು ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ಕ್ರಿಕೆಟ್, 28 ಮತ್ತು 29ರಂದು ಎರಡು ದಿನ ವಾಲಿಬಾಲ್ ಸೇರಿ ಇತರ ಕ್ರೀಡೆಗಳನ್ನು ನಡೆಸಿ. ಎರಡನೇ ದಿನವೇ ಪ್ರಶಸ್ತಿ ವಿತರಿಸಲು ಕ್ರಮ ಕೈಗೊಳ್ಳಿ. ರಾಷ್ಟ್ರ, ಅಂತಾರಾಷ್ಟ್ರೊಯ ಕ್ರೀಡಾಪಟುಗಳನ್ನು ಆಹ್ವಾನಿಸಿ. ಅವರಿಗೆ ಅಗತ್ಯ ಊಟ, ವಸತಿ ವ್ಯವಸ್ಥೆ ಮಾಡಿ. ಕನಕಗಿರಿಯಲ್ಲಿ ಲಾಡ್ಜ್ಗಳಿಲ್ಲ. ಗಂಗಾವತಿಯಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಿ. ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳ ಪರಿಚಯಿಸುವ ಚಿತ್ರ ಪ್ರದರ್ಶನ ಆಯೋಜಿಸಿ. ತಾತ್ಕಾಲಿಕ ಆರೋಗ್ಯ ಕೇಂದ್ರಗಳು, ಆ್ಯಂಬುಲೆನ್ಸ್ ಸೌಲಭ್ಯ ಇರವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಮಾರ್ಚ್ 1ರಂದು ಮ್ಯಾರಥಾನ್ : ಮಾ.1ರಂದು ಮ್ಯಾರಥಾನ್ ಹಾಗೂ ಮಾರ್ಚ್ 3 ರಂದು ಬೆಳಗ್ಗೆ ಎತ್ತಿನ ಬಂಡಿ ಮೆರವಣಿಗೆ ಆಯೋಜಿಸಿ. ಉತ್ಸವ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಬರಲಿದ್ದಾರೆ. ಉಳಿದಂತೆ ಇತರ ಗಣ್ಯರು ಆಗಮಿಸುವರು. ಗ್ರೀನ್ ರೂಮ್ ಮತ್ತು ಡ್ರೆಸ್ಸಿಂಗ್ ರೂಮ್ ಬಳಿ ಹೆಚ್ಚುವರಿ ಭದ್ರತೆ ಇರಲಿ. ಮುಖ್ಯ ವೇದಿಕೆಗೆ ಉಡಚಪ್ಪ ನಾಯಕ ಹೆಸರಿರಲಿ. ಎರಡನೇ ವೇದಿಕೆಗೆ ಪುಟ್ಟರಾಜ ಗವಾಯಿಗಳ ಹೆಸರಿಡಿ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬರುವ ಬಸ್ಗಳಿಗೆ ಉತ್ಸವದ ಪೋಸ್ಟರ್ ಅಂಟಿಸಿ. ಎರಡು ದಿನ 25 ಬಸ್ಗಳನ್ನು ಉಚಿತವಾಗಿ ಓಡಿಸಿ. ವೇದಿಕೆ ಸೇರಿ ಇತರ ಸ್ಥಳಗಳಲ್ಲಿ ಶೌಚಗೃಹ ನಿರ್ಮಿಸುವಂತೆ ಸೂಚಿಸಿದರು.
ಉತ್ಸವ ಲೋಗೋ ಬಿಡುಗಡೆ
ಕನಕಗಿರಿ ಉತ್ಸವ ಅಂಗವಾಗಿ ಜಿಲ್ಲಾಡಳಿತದಿಂದ ತಯಾರಿಸಿದ ಲೋಗೋವನ್ನು ಸಚಿವ ತಂಗಡಗಿ ಬಿಡುಗಡೆಗೊಳಿಸಿದರು. ಕನಕಾಚಲಪತಿ ದೇವಾಲಯ, ಕನಕಾಚಲಪತಿ ಮೂರ್ತಿಗಳನ್ನು ಲಾಂಛನ ಒಳಗೊಂಡಿದೆ. ಮಧ್ಯದಲ್ಲಿನ ಮೂರ್ತಿ ಚಿತ್ರ ಚಿಕ್ಕದಾಗಿದ್ದು, ಅದನ್ನು ಸ್ವಲ್ಪ ದೊಡ್ಡದಾಗಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಉಳಿದಂತೆ ಎಲ್ಲ ಸರಿಯಾಗಿದೆ ಎಂದು ಬಿಡುಗಡೆ ಮಾಡಿದರು.
ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಇತರ ಅಧಿಕಾರಿಗಳಿದ್ದರು.