ಕೊಪ್ಪಳ: ಇದೇ ಮಾರ್ಚ್ 2 ಮತ್ತು 3ರಂದು ಎರಡು ದಿನ ಐತಿಹಾಸಿಕ ಕನಕಗಿರಿ ಉತ್ಸವ ಆಯೋಜಿಸಿದ್ದು, ಮಾ.2ರಂದು ಸಂಜೆ ಸಿಎಂ ಸಿದ್ದರಾಮಯ್ಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಎದುರು ಹನುಮಪ್ಪ ದೇವಸ್ಥಾನದಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇವಸ್ಥಾನವರೆಗೆ ಕಲಾತಂಡಗಳಮೆರವಣಿಗೆ ಇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೆರವಣಿಗೆಗೆ ಚಾಲನೆ ನೀಡುವರು. ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ರಾಜಾ ಉಡಚಪ್ಪ ನಾಯಕ ವೇದಿಕೆಯಲ್ಲಿ ಉತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಡಿಸಿಎಂ ಡಿ.ಕೆ.ಶಿವಕುಮರ್, ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಗಾಲಿ ಜನಾರ್ದನ ರೆಡ್ಡಿ, ವಿಪ ಸದಸ್ಯರಾದ ಶಶೀಲ್ ನಮೋಶಿ, ಡಾ.ಚಂದ್ರಶೇಖರ ಪಾಟೀಲ್, ಶರಣಗೌಡ ಬಯ್ಯಾಪುರ, ಹೇಮಲತಾ ನಾಯಕ. ರಾಜ ವಂಶಸ್ಥ ರಾಜ ನವೀನಚಂದ್ರ ನಾಯಕ ಹುಲಿಹೈದರ ಭಾಗಿಯಾಗಲಿದ್ದಾರೆ.
ದಿವಂಗತ ನಟ ಪುನೀತ್ ರಾಜಕುಮಾರ್ ಕುರಿತು ಎಐ ಡ್ರೋನ್ ಲೈಟಿಂಗ್ ಪ್ರದರ್ಶನ, ಖ್ಯಾತ ಗಾಯಕರಾದ ರಾಜೇಶ ಕೃಷ್ಣನ್, ಅನನ್ಯ ಭಟ್ ತಂಡದಿಂದ ಗಾಯನ, ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ತಂಡದಿಂದ ನೃತ್ಯ, ಕಾಮಿಡಿ ಕಿಲಾಡಿಗಳು ತಂಡದಿಂದ ಹಾಸ್ಯ ಕಾರ್ಯಮಗಳಿರಲಿದ್ದು, ಸಾರ್ವಜನಿಕರನ್ನು ರಂಜಿಸಲಿವೆ.
ಡಾ.ಪಂಡಿತ್ ಪುಟ್ಟರಾಜ ಗವಾಯಿ ವೇದಿಕೆಯಲ್ಲಿ ಕನಕಗಿರಿ ಇತಿಹಾಸ, ಚರಿತ್ರೆ, ವಾಸ್ತು ಶಿಲ್ಪ, ಜಿಲ್ಲೆಯ ನೀರಾವರಿ ಯೋಜನೆ ಕುರಿತು ವಿಚಾರ ಗೋಷ್ಠಿ, ಮಹಿಳಾಗೋಷ್ಠಿ, ಕವಿಗೋಷ್ಠಿ, ಸ್ಥಳಿಯ ಕಲಾವಿದರಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.3ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಇರಲಿದೆ.