

ಸರಗೂರು: ಗೌರಿ-ಗಣೇಶ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಣೆ ಮಾಡಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಲಕ್ಷ್ಮೀಕಾಂತ್ ಸಲಹೆ ನೀಡಿದರು.
ಸರಗೂರು ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಗ್ರಾಮಗಳ ಮುಖಂಡರ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಧ್ವನಿ ವರ್ಧಕಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಬಳಕೆ ಮಾಡಬೇಕು. ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ವಿಸರ್ಜನೆ ಸಮಯದಲ್ಲಿ ಆಂಬುಲೆನ್ಸ್‌ಗಳಿಗೆ ಹಾಗೂ ವಾಹನ ದಟ್ಟಣೆಯಾಗದಂತೆ ಎಚ್ಚರವಹಿಸಬೇಕು. ಏನಾದರೂ ತೊಂದರೆ ನೀಡುವುದು ಕಂಡುಬಂದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಷ್ಠಾಪನಾ ಸ್ಥಳ ಹಾಗೂ ಮೆರವಣಿಗೆಯಲ್ಲಿ ಡಿಜೆಗೆ ಅನುಮತಿ ಇಲ್ಲ. ಮೈಕ್ ಹಾಕಿಕೊಂಡು ಗಣೇಶ ವಿಸರ್ಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ನಂದೀಶ್ ಕುಮಾರ್ ಮಾತನಾಡಿ, ಗ್ರಾಪಂ, ಪಪಂ, ಪೊಲೀಸ್, ಸೆಸ್ಕ್, ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಒಂದೇ ಸೂರಿನಡಿ ಅನುಮತಿ ಪತ್ರ ವಿತರಿಸಲಾಗುವುದು. ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಈಗಾಗಲೇ ಎಲ್ಲೆಡೆ ಶಾಂತಿ ಸಭೆ ಆಯೋಜಿಸಲಾಗುತ್ತಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಗುರುತಿಸಿರುವ ಕೆರೆಗಳು, ನದಿಗೆ ಸಂಜೆ 6 ಗಂಟೆಯೊಳಗೆ ವಿಸರ್ಜನೆ ಮಾಡಬೇಕು. ಜಾತಿ, ಧರ್ಮ ಭೇದವಿಲ್ಲದೆ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದರು.
ಪಿಎಸ್‌ಐ ಗೋಪಾಲ್, ಸರಗೂರು ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಸುಭಾನ್, ಇಮ್ರಾನ್, ವಿವಿಧ ಗ್ರಾಮಗಳ ಮುಖಂಡರು ಇದ್ದರು.