ಗೊಬ್ಬರ ದಾಸ್ತಾನು ಪರಿಶೀಲನೆ

ಗೊಬ್ಬರ ದಾಸ್ತಾನು ಪರಿಶೀಲನೆ
Published on

ಚನ್ನರಾಯಪಟ್ಟಣ: ತಾಲೂಕಿನ ಹಲವು ಕಡೆಗಳಲ್ಲಿ ಯೂರಿಯಾ ಗೊಬ್ಬರವನ್ನು ದಾಸ್ತಾನು ಮಾಡಿರುವ ಬಗ್ಗೆ ಪರಿಶೀಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಗುರುವಾರ ತಡರಾತ್ರಿ ದಿಢೀರ್ ಪರಿಶೀಲನೆ ನಡೆಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಜತೆಯಲ್ಲಿ ತಾಲೂಕಿನ ಹಲವು ಗೋದಾಮುಗಳಿಗೆ ಭೇಟಿ ನೀಡಿದ ತಹಸೀಲ್ದಾರ್, ದಾಸ್ತಾನು ಬಗ್ಗೆ ಮಾಹಿತಿ ಪಡೆದುಕೊಂಡರು. ಪೂರೈಕೆ, ಸಂಗ್ರಹ ಹಾಗೂ ಮಾರಾಟದ ಬಗ್ಗೆ ದಾಖಲೆ ಸಮೇತ ವಿವರಣೆ ಪಡೆದರು.

ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಸುವವರು ಹಾಗೂ ಯೂರಿಯಾವನ್ನು ಅಕ್ರಮವಾಗಿ ಖರೀದಿಸಿ ದಾಸ್ತಾನು ಇರಿಸಿ ದುಪ್ಪಟ್ಟು ಬೆಲೆಗೆ ಮಾರುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಹಲವು ಗೋದಾಮುಗಳಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಅಕ್ರಮ ದಾಸ್ತಾನು ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಪುನಾ ದಿಢೀರ್ ಭೇಟಿ ನಡೆಸಲಾಗುವುದು ಎಂದರು.

ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ಸಿಗುವ ನಿಟ್ಟಿನಲ್ಲಿ ಪರಿಶೀಲನೆ ಕೈಗೊಂಡು ತಾಲೂಕು ವ್ಯಾಪ್ತಿಯ ರೈತರಿಗೆ ಯಾವುದೇ ಕೃತಕ ಅಭಾವ ಸೃಷ್ಟಿಸದೆ ರಸಗೊಬ್ಬರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಲು ಸೂಚನೆ ನೀಡಲಾಯಿತು.

ತಹಸೀಲ್ದಾರ್ ಜತೆಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಕೆ.ಮೋಹನ್ ಕುಮಾರ್, ಚನ್ನರಾಯಪಟ್ಟಣ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್, ನಗರ ವೃತ್ತ ನಿರೀಕ್ಷಕ ಎಸ್.ಎಂ.ರಘುಪತಿ, ಪೊಲೀಸ್ ಉಪ ಆರಕ್ಷಕ ಎಸ್.ಕೆ.ಮಲ್ಲಪ್ಪ ಗ್ರಾಮ ಲೆಕ್ಕಾಧಿಕಾರಿ ಶ್ರೀಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net