ಫೆರಿ ಸೇವೆ ಮೂರ್ನಾಲ್ಕು ವರ್ಷಗಳಲ್ಲಿ ಆರಂಭ

Guests who Participated in maritime board Function
Published on

ಕಾರವಾರ: ಮಂಗಳೂರಿನಿಂದ ಲಕ್ಷ ದ್ವೀಪ ಸಂಪರ್ಕಿಸಲು ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಫೆರಿ ಸೇವೆ ಆರಂಭವಾಗಲಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಕಪಿಲ್ ಮೋಹನ್ ತಿಳಿಸಿದರು‌.

ರಾಷ್ಟ್ರೀಯ ಜಲಸಾರಿಗೆ ದಿನದ ಅಂಗವಾಗಿ ಅಲಿಗದ್ದಾದಲ್ಲಿ ಮಂಡಳಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಫೆರಿ ಸೇವೆ ಗೆ ಪ್ರತ್ಯೇಕ ಜಟ್ಟಿ ನಿರ್ಮಾಣ

ಲಕ್ಷದ್ವೀಪ ಸಂಪರ್ಕಿಸಲು ಫೆರಿ ಸೇವೆಗೆ ಪ್ರತ್ಯೇಕ ಜಟ್ಟಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕರ್ನಾಟಕ ಜಲಸಾರಿಗೆ ಮಂಡಳಿ ರಚನೆಯಾಗಿ ನಾಲ್ಕು ವರ್ಷಗಳಲ್ಲಿ ರಾಜ್ಯದ ಕರಾವಳಿಯ 3 ಜಿಲ್ಲೆಗಳಲ್ಲಿ 30 ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಕರ್ನಾಟಕ ಕರಾವಳಿಯ ಚಿತ್ರಣವನ್ನೇ ಬದಲಿಸಲಿರುವ ಇನ್ನೂ 40 ಪ್ರಮುಖ ಯೋಜನೆಗಳು ಶೀಘ್ರ ಪ್ರಾರಂಭವಾಗಲಿವೆ ಎಂದರು.

ಕೇಂದ್ರ ಸರ್ಕಾರದ ಸಾಗರ ಮಾಲಾ ಹಾಗೂ ಎಡಿಬಿ ನೆರವು ಪಡೆದು ಹೊಸ ಜಟ್ಟಿಗಳು, ಬಂದರುಗಳಿಗೆ ರೈಲ್ವೆ, ರಸ್ತೆ ಸಂಪರ್ಕ ಹಾಗೂ ಇತರ ಮೂಲ ಸೌಕರ್ಯ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ದೇಶ ಹಿತದ ಬೃಹತ್ ಯೋಜನೆಗಳು ಜಾರಿಯಾಗಬೇಕಾದರೆ, ಸ್ಥಳೀಯರು ಕೆಲವೊಂದನ್ನು ತ್ಯಾಗ ಮಾಡಬೇಕಾಗಿರುವುದು ಅನಿವಾರ್ಯ ಎಂದರು.

ಜಲಸಾರಿಗೆ ಮಂಡಳಿಯ ಸಹಯೋಗದಲ್ಲಿ ಮುಂಬೈನ ಬೆಸ್ಟ್ ಸೀ ಫೆರರ್ಸ್ ಎಂಬ ಸಂಸ್ಥೆ ನಡೆಸಿದ ನೌಕಾಯಾನಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾದ 17 ಜನರಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.

ಬಂದರು ಇಲಾಖೆ ನೌಕರರು ಹಾಗೂ ಅವರ ಕುಟುಂಬದವರಿಗಾಗಿ ನಡೆಸಿದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಂಪನಿಗಳಿಗೆ ಬಹುಮಾನ

84 ಹಡಗುಗಳನ್ನು ನಿರ್ವಹಿಸಿದ ಬೆಸ್ಟ್ ಸ್ಟೀಮರ್ ಏಜೆಂಟ್ ಆಗಿ ಮರೈನ್ ಲಿಂಕ್ ಕಂಪನಿ, ಅತಿ ಹೆಚ್ಚು ದ್ರವ ಉತ್ಪನ್ನಗಳ ಆಮದು, ರಫ್ತು ಮಾಡಿದ ಮೈಸೂರು ಮರ್ಕಂಟೈಲ್ ಕಂಪನಿ, ಘನ ಉತ್ಪನ್ನಗಳ ಆಮದು ಮಾಡಿಕೊಂಡ ಗ್ಲೋರಿ ಶಿಪ್ಪಿಂಗ್ ಕಂಪನಿಗೆ ಸ್ಮರಣಿಕೆ ನೀಡಲಾಯಿತು.

ಮೆರಿಟೈಮ್ ಡೇ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸರಿತಾ ಎಂಟರ್ ಪ್ರೈಸರ್ ಬಹುಮಾನ ಪಡೆಯಿತು.

ಪರಿಸರ ಉಳಿಸುವುದು ಎಲ್ಲರ ಜವಾಬ್ದಾರಿ. ಆದರೆ, ಅದರ ಹೆಸರಿನಲ್ಲಿ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದು ಸರಿಯಲ್ಲ. ಹಲವು ವರ್ಷಗಳ ಹಿಂದೆ ಮಂಜೂರಾದ ಕಾರವಾರ ವಾಣಿಜ್ಯ ಬಂದರು ವಿಸ್ತರಣೆಗೆ ಇಂಥ ಉದ್ದೇಶಪೂರ್ವಕ ವಿರೋಧಗಳು ನಡೆಯುತ್ತಿವೆ. ಮುಂದೆಯೂ ಜಾರಿಯಾಗದಿದ್ದಲ್ಲಿ ಯೋಜನೆ ಕಾರವಾರದ ಕೈ ತಪ್ಪಲಿದೆ. ಯೋಜನೆಗಳಿಗೆ ಸ್ಥಳೀಯರ, ಜನನಾಯಕರ ಸಹಕಾರ ಅಗತ್ಯ.
- ಕಪಿಲ್ ಮೋಹನ್ ಕರ್ನಾಟಕ ಮೆರಿಟೈಮ್ ಬೋರ್ಡ್ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net