ಹೆಣ್ಣು ಭ್ರೂಣ ಹತ್ಯೆ ಪೈಶಾಚಿಕ ಕೃತ್ಯ ಕೊನೆಯಾಗಬೇಕು

IMG-20231214-WA0017
Published on

ಚನ್ನಪಟ್ಟಣ

ಹಲವಾರು ವರ್ಷಗಳಿಂದ ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಹತ್ಯೆ ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಇದನ್ನು ಮಟ್ಟಹಾಕಲು ಪ್ರಬಲ ಕಾನೂನು ಜಾರಿಯಾಗಬೇಕು ಎಂದು ರೈತಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶ್ವೇತಾ ಆಗ್ರಹಿಸಿದರು.

ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹೆಣ್ಣು ಇಲ್ಲದ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ, ಹೆಣ್ಣು ಭ್ರೂಣ ಹತ್ಯೆ ಮಾಡುವ ಪ್ರಕರಣಗಳು ಪದೇಪದೆ ಬೆಳಕಿಗೆ ಬರುತ್ತಿರುವುದು ನಾಚಿಕೆಗೇಡು. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲದರಲ್ಲೂ ಸಮನಾಗಿ ನಿಲ್ಲುವ ಶಕ್ತಿಯಿರುವ ಹೆಣ್ಣನ್ನು ಈ ರೀತಿ ಹತ್ಯೆ ಮಾಡಿ ಬಿಸಾಡುವ ಪೈಶಾಚಿಕ ಕೃತ್ಯ ಕೊನೆಯಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಪ್ರಬಲ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಹಲವಾರು ಮಹಿಳಾ ಪದಾಧಿಕಾರಿಗಳು, ಹೆಣ್ಣುಭ್ರೂಣ ಹತ್ಯೆಯನ್ನು ಕಟುವಾಗಿ ಖಂಡಿಸಿದರು. ಭ್ರೂಣ ಹತ್ಯೆಯ ಬಗ್ಗೆ ಅದರ ಪರಿಣಾಮಗಳ ಬಗ್ಗೆ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸರ್ಕಾರ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿದರು. ನಗರದ ಗಾಂಧಿಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾನಿರತರು ತಾಲೂಕು ಕಚೇರಿ ಬಳಿ ಉಪ ತಹಸೀಲ್ದಾರ್ ಲಕ್ಷ್ಮೀದೇವಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಿ.ಶೋಭಾ, ಜಿಲ್ಲಾ ಕಾರ್ಯದರ್ಶಿ ರೂಪಾ, ಗೌರವಾಧ್ಯಕ್ಷೆ ಸಾವಿತ್ರಮ್ಮ, ಕಾರ್ಯಾಧ್ಯಕ್ಷೆ ಎಸ್.ಶ್ವೇತಾ, ಪ್ರಧಾನ ಕಾರ್ಯದರ್ಶಿ ಅನಿತಾ, ಉಪಾಧ್ಯಕ್ಷೆ ಸುಶೀಲಮ್ಮ, ಸಂಘಟನಾ ಕಾರ್ಯದರ್ಶಿ ಸುಧಾ, ಖಜಾಂಚಿ ರೂಪ, ಮುಖಂಡರಾದ ರಾಮೇಗೌಡ, ಉಮೇಶ್, ಹನುಮಂತು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಲಿಂಗಾನುಪಾತದಲ್ಲಿ ಏರುಪೇರು

ರೈತ ಮುಖಂಡ ಬೋರಾಪುರ ಶಂಕರೇಗೌಡ ಮಾತನಾಡಿ, ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಲಿಂಗಾನುಪಾತದಲ್ಲಿ ಏರುಪೇರು ಉಂಟಾಗುತ್ತಿದೆ. ಭ್ರೂಣ ಹತ್ಯೆ ಕಾನೂನು ಬಲಿಷ್ಠವಾಗಿದ್ದರೂ ಇಂತಹ ಕೃತ್ಯಗಳು ನಡೆಯುತ್ತಿರುವುದು ಆತಂಕಕಾರಿ. ಇತ್ತೀಚೆಗೆ ಮಂಡ್ಯದಲ್ಲಿ ಬೆಳಕಿಗೆ ಬಂದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಈ ಹೇಯ ಕೃತ್ಯದಲ್ಲಿ ಭಾಗಿಯಾದವರು, ಸಹಕಾರ ನೀಡಿದವರು ಸೇರಿ ಎಲ್ಲರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net