

ಬೆಂಗಳೂರು: ಯುವತಿಯರು ಅಡುಗೆ ಮನೆಯಯಾಚೆಗೂ ಸ್ಪರ್ಧಾತ್ಮಕವಾಗಿ ಬೆಳೆಯಬೇಕು, ಅವರಿಂದ ಎಲ್ಲವೂ ಸಾಧ್ಯವಿದೆ, ಅವೆಲ್ಲವನ್ನು ಸಾಧಿಸಿ ಸಾಧಕರಾಗಬೇಕು ಎಂದು 'ಸದರ್ನ್ ಎಕಾನಮಿಸ್ಟ್ʼ ಇಂಗ್ಲಿಷ್ ಪಾಕ್ಷಿಕದ ಸಂಪಾದಕಿ ಮತ್ತು ಹಿರಿಯ ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ʼಮನೆಯಂಗಳದಲ್ಲಿ ಮನತುಂಬಿ ನಮನʼ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಇಂದು ವಿವಿಧ ಆಯಾಮಗಳನ್ನು ಪಡೆಯುತ್ತಿದ್ದು, ಪತ್ರಕರ್ತರು ಯಾವುದೇ ಭೇದಭಾವ ತೋರಿಸದೆ ಒಗ್ಗಟ್ಟಾಗಿ ಮುನ್ನಡೆದರೆ ಪತ್ರಿಕೋದ್ಯಮ ಇನ್ನೂ ಉತ್ತಮ ದಾರಿಯತ್ತ ಸಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಶೀಲಾ ಅವರು ಎಂಬತ್ತೆಂಟರ ವಯಸ್ಸಲ್ಲೂ ಇಂಗ್ಲಿಷ್ ನಿಯತಕಾಲಿಕವೊಂದರ ಸಂಪಾದಕಿ ಆಗಿರುವುದು ನಿಜಕ್ಕೂ ಪತ್ರಿಕೋದ್ಯಮದ ಹಿರಿಮೆ. ಅವರು ಕೆಯುಡಬ್ಲ್ಯುಜೆ ಹಿತೈಷಿ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅವರು ಇರಿಸಿರುವ ದತ್ತಿನಿಧಿಯಲ್ಲಿ ಪ್ರತಿ ಸಮ್ಮೇಳನದಲ್ಲೂ ಆಂಗ್ಲಭಾಷೆಯ ಪತ್ರಕರ್ತರೊಬ್ಬರಿಗೆ ಸಂಘವು ಪ್ರಶಸ್ತಿ ನೀಡುತ್ತಿದೆ ಎನ್ನುತ್ತ ಸುಶೀಲ ಅವರಿಗೆ ಸಂಘದೊಂದಿಗೆ ಇರುವ ನಂಟನ್ನು ಸ್ಮರಿಸಿದರು.
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಗಾಂಧಿ ವಂದನಾರ್ಪಣೆ ಮಾಡಿದರು. ಕೆಯುಡಬ್ಲ್ಯುಜೆ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಜಕ್ರಿಯಾ, ಖಜಾಂಜಿ ಎ.ಬಿ. ಶಿವರಾಜು ಮತ್ತಿತರ ಸದಸ್ಯರು ಭಾಗವಹಿಸಿದ್ದರು.