

ಚಿಂತಾಮಣಿ: ನಗರದ ಹೊರವಲಯದ ಶ್ರೀನಿವಾಸಪುರ ರಸ್ತೆಯ ಅದ್ವೈತ್ ಹ್ಯುಂಡಾಯ್ ಸಂಸ್ಥೆ ವತಿಯಿಂದ ಭಾನವಾರ ಮೊಟ್ಟ ಮೊದಲ ಬಾರಿಗೆ ವಿಂಟೇಜ್ ಕಾರ್ ರ‌್ಯಾಲಿ ನಡೆಯಿತು.
ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೆಂಗಳೂರಿನಿಂದ ಚಿಂತಾಮಣಿವರೆಗೂ ನಡೆದ ರ‌್ಯಾಲಿ ಬಳಿಕ ಗೋಪಸಂದ್ರ ಹ್ಯುಂಡಾಯ್ ಕಂಪನಿ ಮುಂಭಾಗ ಸಾರ್ವಜನಿಕರ ಪ್ರದರ್ಶನ ನಡೆಯಿತು.
ಒಂದಾನೊಂದು ಕಾಲದಲ್ಲಿ ಗತ್ತಿನಿಂದ ಮೆರೆದ ಕಾರುಗಳು ಮತ್ತೆ ರಸ್ತೆಗೆ ಇಳಿದಿದ್ದವು. ಮೋಟಾರ್ ವಾಹನ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಫಲವಾಗಿ ನೇಪಥ್ಯಕ್ಕೆ ಸೇರಿದ್ದ ಸುಮಾರು 40ಕ್ಕೂ ಹೆಚ್ಚು ಹಳೆ ಕಾರು, ಜೀಪು, ಮೋಟಾರ್ ಬೈಕ್‌ಗಳು ಚಿಂತಾಮಣಿ ಜನರನ್ನು ಆಕರ್ಷಿಸಿದವು.
ಇದೇ ವೇಳೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಟಿ.ಮುರಳೀಧರ್ ಅವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಸಪ್ತಾಹದ ಅರಿವು ಮೂಡಿಸಿದರು.