

* ಚನ್ನಪಟ್ಟಣ ತಾಲೂಕಿನ ಹಲವು ಕೆರೆಕಟ್ಟೆಗಳು ಖಾಲಿ
* ಮಳೆ ಇಲ್ಲದೆ ಬಣಗುಡುತ್ತಿವೆ ಜಲಾಶಯಗಳು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಜೀವನಾಡಿಯಲ್ಲಿ ಒಂದಾದ ಇಗ್ಗಲೂರು ಜಲಾಶಯ (ಎಚ್.ಡಿ. ದೇವೇಗೌಡ ಬ್ಯಾರೇಜ್) ಸಂಪೂರ್ಣ ಬರಿದಾಗಿದೆ. ಇದರೊಂದಿಗೆ ತಾಲೂಕಿನ ಹಲವು ಕೆರೆಕಟ್ಟೆಗಳು ಖಾಲಿಯಾಗಿದ್ದು, ಹಲವು ವರ್ಷಗಳ ನಂತರ ಬೊಂಬೆನಾಡಿನಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ.
ತಾಲೂಕಿನ ಕಣ್ವ ಜಲಾಶಯ ಹಾಗೂ ಇಗ್ಗಲೂರಿನ ಎಚ್.ಡಿ.ದೇವೇಗೌಡ ಬ್ಯಾರೇಜ್ ತಾಲೂಕಿನ ಎರಡು ಜೀವನಾಡಿಗಳಾಗಿವೆ. ಆದರೆ, ವರುಣನ ಅವಕೃಪೆಯಿಂದಾಗಿ ಈ ಜಲಾಶಯಗಳು ನೀರಿಲ್ಲದೆ ಬಣಗುಡುತ್ತಿವೆ. ಈ ಹಿಂದೆ ಏತನೀರಾವರಿ ಯೋಜನೆಗಳಿಂದ ಸಮೃದ್ಧವಾಗಿದ್ದ ಕೆರೆಗಳು ನೀರಿಲ್ಲದೆ ಬರಿದಾಗಿವೆ.
ಬ್ಯಾರೇಜ್ ನೀರನ್ನು ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಈ ಹಿಂದೆ ಗರಕಹಳ್ಳಿ ಹಾಗೂ ಕಣ್ವ ಏತ ನೀರಾವರಿ ಯೋಜನೆ ರೂಪಿಸಿ, ಈ ಮೂಲಕ ತಾಲೂಕಿನ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿತು. ಇದರಿಂದಾಗಿ ತಾಲೂಕಿನ ಕೆರೆಗಳಲ್ಲಿ ನೀರು ತುಂಬುವ ಜತೆಗೆ, ಅಂತರ್ಜಲಮಟ್ಟವೂ ಹೆಚ್ಚಿ ತಾಲೂಕು ನೀರಾವರಿಯಿಂದ ಸಮೃದ್ಧವಾಗಿತ್ತು. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದ ಕಾರಣ, ಬ್ಯಾರೇಜ್ನಲ್ಲಿದ್ದ ನೀರು ಖಾಲಿಯಾಗಿದೆ.
ತಾಲೂಕಿನ ಗಡಿಗ್ರಾಮ ಇಗ್ಗಲೂರಿನಲ್ಲಿ 1996ರಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಲಾಗಿದ್ದು, ಎಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ಈ ಜಲಾಶಯದ ನಿರ್ಮಾಣಕ್ಕೆ ಮುತುವರ್ಜಿವಹಿಸಿದ್ದರು. ಈ ಕಾರಣದಿಂದ ಈ ಜಲಾಶಯಕ್ಕೆ ಎಚ್.ಡಿ.ದೇವೇಗೌಡ ಬ್ಯಾರೇಜ್ ಎಂದೇ ಹೆಸರಿಡಲಾಗಿದೆ. ಇದು ತಾಲೂಕಿನ ರೈತರ ಜೀವನಾಡಿ ಎಂದರೆ ತಪ್ಪೇನಿಲ್ಲ. 18 ಅಡಿ ಎತ್ತರದ ಈ ಬ್ಯಾರೇಜ್ 0.18 ಟಿಎಂಸಿ ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಸುತ್ತ ಈ ಜಲಾಶಯದಲ್ಲಿ ಕೇವಲ 5 ಅಡಿ ನೀರು ಮಾತ್ರವಿದೆ. 10 ಅಡಿಗಿಂತ ಕಡಿಮೆ ಸಂಗ್ರಹ ಇದ್ದರೆ ಆ ನೀರನ್ನು ಕಾಲುವೆಗಳಿಗೆ ಹರಿಸಲು ಸಾಧ್ಯವಾಗುವುದಿಲ್ಲ. ಅದನ್ನು ಡೆಟ್ ಸ್ಟೊರೇಜ್ ಎನ್ನಲಾಗುತ್ತದೆ. ಅಂದರೆ ಈ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ಗಿಂತಲೂ ತಳಮುಟ್ಟಿದೆ.
ಮಳೆ ಇಲ್ಲದ ಕಾರಣದಿಂದಾಗಿ ಇಗ್ಗಲೂರು ಜಲಾಶಯದಲ್ಲಿ ನೀರಿಲ್ಲದೇ ಏತನೀರಾವರಿ ಮೋಟಾರ್ ಸ್ಥಗಿತಗೊಳಿಸಿರುವ ಕಾರಣ ತಾಲೂಕಿನ ಬಹುತೇಕ ಕೆರೆಗಳು ಬರಿದಾಗಿವೆ. ಕಳೆದ ಅಕ್ಟೋಬರ್‌ನಲ್ಲಿ ಗರಕಹಳ್ಳಿ ಕೆರೆಯ ಮೂಲಕ ಇತರ ಕೆರೆಗಳಿಗೆ ನೀರು ಹರಿಸಲು ಪ್ರಾರಂಭಿಸಲಾಗಿತ್ತು. ಆದರೆ, ಜಲಾಶಯದಲ್ಲಿ ನೀರಿನಮಟ್ಟ ಕಡಿಮೆಯಾದ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ನೀರು ಹರಿಸುವುದನ್ನು ನಿಲ್ಲಿಸಲಾಯಿತು. ಇದರಿಂದ ತಾಲೂಕಿನ ಬಹುತೇಕ ಕೆರೆಗಳು ನೀರಿಲ್ಲದಂತಾಗಿದೆ.
ಇಗ್ಗಲೂರು ಜಲಾಶಯ ಸೇರಿ ತಾಲೂಕಿನ ಬಹುತೇಕ ಕೆರೆಗಳು ಖಾಲಿಯಾಗಿರುವ ಮಧ್ಯೆ ತಾಲೂಕಿನ ಮತ್ತೊಂದು ಜೀವನಾಡಿ ಕಣ್ವ ಜಲಾಶಯದಲ್ಲಿ ನೀರಿರುವುದು ಸಂತಸದ ವಿಚಾರವಾಗಿದೆ. ಈ ಜಲಾಶಯದ ನೀರಿನ ಮಟ್ಟ ಗರಿಷ್ಠ 33 ಅಡಿಗಳಾಗಿದ್ದು, ಪ್ರಸುತ್ತ 22.11 ಅಡಿ ನೀರು ಲಭ್ಯವಿದೆ. ಆದರೆ, ಈ ನೀರು ಬಳಕೆಗೆ ಲಭ್ಯವಾಗುತ್ತಿಲ್ಲ. ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನಾದರೂ ನಾಲೆಗಳು ಅಥವಾ ಕಣ್ವನದಿಗೆ ಹರಿಸಿದರೆ, ಬಿಸಿಲ ಬೇಗೆಯಿಂದ ಸಂಕಷ್ಟದಲ್ಲಿರುವ ಜನತೆಗೆ ಸ್ವಲ್ಪವಾದರೂ ಅನುಕೂಲವಾಗಲಿದೆ. ನೀರಾವರಿ ಇಲಾಖೆಯ
ಅಧಿಕಾರಿಗಳು ಈ ಬಗ್ಗೆ ಗಮನಹರಿಸಿದರೆ, ರೈತರಿಗೆ ಅನುಕೂಲವಾಗುವ ಜತೆಗೆ, ಕೊನೆಪಕ್ಷ ಪ್ರಾಣಿಪಕ್ಷಿಗಳ ದಾಹವಾದರೂ ತಣ್ಣಿಯಲಿದೆ.
ಎಚ್.ಡಿ. ದೇವೇಗೌಡ ಬ್ಯಾರೇಜ್ನಲ್ಲಿ ನೀರಿನ ಸಂಗ್ರಹ ತಳಮಟ್ಟ ತಲುಪಿರುವ ಕಾರಣ ಬ್ಯಾರೇಜ್ ನಿರ್ಮಾಣ ಮಾಡುವ ಮೊದಲು ನದಿಯಲ್ಲಿ ಕಟ್ಟಿದ್ದ ಹಳೆಯ ಸೇತುವೆ ಕಾಣಿಸಲಾರಂಭಿಸಿದೆ. ಇದೇ ಮೊದಲ ಬಾರಿಗೆ ಜಲಾಶಯ ಈ ಮಟ್ಟಿಗೆ ಬರಿದಾಗಿದೆ. ಪ್ರಗತಿಯಲ್ಲಿರುವ ಸತ್ತೇಗಾಲ ಯೋಜನೆಯ ಅವಶ್ಯಕತೆ ಜನರಿಗೆ ಈಗ ಅರಿವಾಗುತ್ತಿದೆ. ಸತ್ತೇಗಾಲ ಯೋಜನೆ ಅನುಷ್ಠಾನವಾದರೆ, ನಮ್ಮ ಜಲಾಶಯ ಸದಾ ತುಂಬಿರುತ್ತದೆ. ಆದಷ್ಟೂ ಬೇಗ ಈ ಕಾಮಗಾರಿ ಮುಕ್ತಾಯವಾಗಲಿ.ಇ.ತಿ. ಶ್ರೀನಿವಾಸ್ ಇಗ್ಗಲೂರು
==
ಬ್ಯಾರೇಜ್ ನಲ್ಲಿ ನೀರಿಲ್ಲದ ಕಾರಣ ಏತನೀರಾವರಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಬಹುತೇಕ ಕೆರೆಗಳು ಖಾಲಿಯಾಗಿವೆ. ಇದರ ಮಧ್ಯೆ ಕಣ್ವ ಜಲಾಶಯದಲ್ಲಿ ಇರುವ ನೀರನ್ನು ಬಳಕೆ ಮಾಡಲು ಅಧಿಕಾರಿಗಳು ಮುಂದಾದರೆ ರೈತರಿಗೆ ಅನುಕೂಲವಾಗಲಿದೆ. ಕಣ್ವನದಿ ಅಥವಾ ನಾಲೆಗಳಿಗೆ ಜಲಾಶಯದ ನೀರು ಹರಿಸಲು ಅಧಿಕಾರಿಗಳು ಕ್ರಮಕೈಗೊಳ್ಳಲಿ.ಟಿ.ಪಿ.ರಘುನಂದನ್, ತಿಟ್ಟಮಾರನಹಳ್ಳಿಕಣ್ವ ಜಲಾಶಯದಲ್ಲಿ ಸದ್ಯ 22.11 ಅಡಿ ನೀರಿನ ಶೇಖರಣೆ ಇದೆ. ಈ ನೀರಿನ ಬಳಕೆಗೆ ನಮ್ಮ ಹಿರಿಯ ಅಧಿಕಾರಿಗಳು ಸೂಚನೆ ನೀಡಬೇಕಿದೆ. ಜಲಾಶಯದ ನೀರು ಬಳಕೆಗೆ ಸಾರ್ವಜನಿಕರ ಒತ್ತಡವಿದೆ. ಈ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.ಸುರೇಶ್, ಎಇಇ ಕಾವೇರಿ ನೀರಾವರಿ ನಿಗಮ.