

ಪುರುಷೋತ್ತಮ ಪೆರ್ಲ ಕಾಸರಗೋಡು
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳಿಗೆ ಹಾದಿ ಮಾಡಿಕೊಡುವ ರೀತಿಯಲ್ಲಿ ಕೆಂಪುಕಲ್ಲು, ಕಗ್ಗಲ್ಲು ಕ್ವಾರಿಗಳು ತಲೆಯೆತ್ತುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯಲ್ಲಿ ತಲೆಯೆತ್ತುತ್ತಿರುವ ಬಹುತೇಕ ಕೆಂಪುಕಲ್ಲು ಕ್ವಾರಿಗಳು ಅನಧಿಕೃತವಾಗಿದ್ದು, ಇವೆಲ್ಲವೂ ವಿವಿಧ ಇಲಾಖೆ ಅಧಿಕಾರಿಗಳ ಕೃಪಾಕಟಾಕ್ಷದೊಂದಿಗೆ ಕಾರ್ಯಾಚರಿಸುತ್ತಿವೆ. ಅನಧಿಕೃತ ಕ್ವಾರಿಗಳ ವಿರುದ್ಧ ಕಾರ್ಯಾಚರಿಸಬೇಕಾದ ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಮೌನ ಧೋರಣೆ ಪ್ರಕೃತಿ ಶೋಷಣೆಗೆ ಕಾರಣವಾಗುತ್ತಿದೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರಂಪರಿಕ ಜಲಮೂಲವನ್ನೂ ಬಿಡದೆ ಕೆಂಪುಕಲ್ಲು ಕ್ವಾರಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಎಣ್ಮಕಜೆ ಗ್ರಾಮದ ಬೇಂಗಪದವು, ಕುರಡ್ಕ ಪ್ರದೇಶದಲ್ಲಿ ವ್ಯಾಪಕವಾಗಿ ಕೆಂಪುಕಲ್ಲು ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ಇದರಿಂದ ಇತಿಹಾಸ ಪ್ರಸಿದ್ಧ ಇಟ್ಟಿಪಳ್ಳ ಹೇಳ ಹೆಸರಿಲ್ಲದಂತೆ ನಾಶಗೊಂಡಿದೆ. ಪಾರಂಪರಿಕ ಜಲಮೂಲವಾಗಿ ಗುರುತಿಸಲ್ಪಟ್ಟಿರುವ ಇಟ್ಟಿಪಳ್ಳ ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರನ್ನು ತನ್ನ ಒಡಲಲ್ಲಿ ತುಂಬಿ ಜಲಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು. ಅಂತಹ ಬೃಹತ್ ಹಳ್ಳ ಇಂದು ನೆನಪಾಗಿ ಉಳಿದುಕೊಂಡಿದೆ. ಇಟ್ಟಿಪಳ್ಳದ ಅನತಿ ದೂರದಲ್ಲಿ ಬೇಂಗಪದವು ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಚಟುವಟಿಕೆ ನಡೆಸುತ್ತಿದ್ದು, ನಿರಂತರ ಕಲ್ಲುಕಡಿಯುವ ಯಂತ್ರಗಳ ಶಬ್ದದಿಂದ ಇಲ್ಲಿನ ಮಕ್ಕಳ ಓದಿಗೂ ತೊಡಕುಂಟಾಗುತ್ತಿದೆ. ಶಾಲೆ ಹಾಗೂ ಕೆಳಭಾಗದ ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ಬತ್ತದೆ ತುಂಬಿಕೊಂಡಿರಲು ಇಲ್ಲಿನ ಇಟ್ಟಿಪಳ್ಳವೇ ಕಾರಣವಾಗಿತ್ತು. ಇಟ್ಟಿಪಳ್ಳ ಪರಿಸರ ಸಂರಕ್ಷಣೆಯ ಜತೆಗೆ ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದೆ. ಇಟ್ಟಿಪಳ್ಳದಲ್ಲಿ ಪಾಂಡವರು ದೇವಸ್ಥಾನ ನಿರ್ಮಾಣಕ್ಕಾಗಿ ಕೊರೆದಿದ್ದಾರೆ ಎನ್ನಲಾದ ಬೃಹತ್ ಹೊಂಡಗಳನ್ನೂ ಕಾಣಬಹುದಾಗಿತ್ತು.
ಇಟ್ಟಿಪಳ್ಳ ಪ್ರದೇಶದಲ್ಲಿ ಮೇಲಿನ ಹಾಸು ಲ್ಯಾಟರೈಟ್ ಪಾರೆಯಾಗಿದ್ದರೂ, ಏಳೆಂಟು ಅಡಿ ತಳಭಾಗ ಜೇಡಿಮಣ್ಣಿನಿಂದ ಕೂಡಿದೆ. ಇಲ್ಲಿ ಕಿಲೋಮೀಟರ್ ವ್ಯಾಪ್ತಿಯ ವರೆಗೂ ಕಲ್ಲು ತೆಗೆಯಲಾಗಿದ್ದು, ಮರುಭೂಮಿಯಂತಾಗಿದೆ. ವಿಪರ್ಯಾಸವೆಂದರೆ, ಈ ಪ್ರದೇಶದಿಂದ ನೂರಾರು ಲೋಡು ಕಲ್ಲು ತೆಗೆಯಲಾಗುತ್ತಿದ್ದು, ಇದರಲ್ಲಿ ಬಹುತೇಕ ಪಾಲು ಕರ್ನಾಟಕಕ್ಕೆ ರವಾನೆಯಾಗುತ್ತಿದೆ. ಇಲ್ಲಿನ ಕ್ವಾರಿಗಳೆಲ್ಲವೂ ಪರವಾನಗಿಯಿಲ್ಲದೆ ಕಾರ್ಯಾಚರಿಸುತ್ತಿದ್ದರೂ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆ ಮೌನವಹಿಸಿರುವುದು ಸಂಶಯಕ್ಕೆಡೆಮಾಡಿಕೊಟ್ಟಿದೆ.
ಕೊಡಂಗೆ ಪಳ್ಳ ಎಂಬ ಮುರಕಲ್ಲಿನ ಪ್ರದೇಶದ ಆಸುಪಾಸಿನ ಜಾಗವನ್ನೂ ಕೆಂಪುಕಲ್ಲು ದಂಧೆ ಆಕ್ರಮಿಸಿಕೊಳ್ಳುತ್ತಿದೆ. ಇದು ಹಾಸುಪಾರೆಯಲ್ಲಿನ ಬೃಹತ್ ನೀರಿನ ಸಂಗ್ರಹಾಗಾರವಾಗಿದೆ. ಮಳೆಗಾಲದಲ್ಲಿ ಇಲ್ಲಿ ಸಂಗ್ರಹಗೊಳ್ಳುವ ನೀರು ಬೇಸಿಗೆಯಲ್ಲೂ ಕೆಲವು ತಿಂಗಳ ಕಾಲ ಬತ್ತದೆ ಉಳಿದುಕೊಳ್ಳುತ್ತದೆ. ಅಗಾಧ ಪ್ರಮಾಣದಲ್ಲಿ ನೀರನ್ನು ಭೂಮಿಯೊಳಗೆ ಇಂಗಿಸಿಕೊಳ್ಳುತ್ತಿರುವ ಇಂತಹ ಪಾರಂಪರಿಕ ಹಳ್ಳಗಳನ್ನು ಸಂರಕ್ಷಿಸಬೇಕಾದ ಅಧಿಕಾರಿಗ ನಿಷ್ಕ್ರಿಯರಾಗಿದ್ದಾರೆ. ಕೆಂಪುಕಲ್ಲು ಕಡಿದು ವ್ಯಾಪಕವಾಗಿ ಪ್ರಾಕೃತಿಕ ಶೋಷಣೆ ನಡೆಸುತ್ತಿದ್ದರೂ, ತಮಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲೇ ಅತ್ಯಂತ ದೊಡ್ಡದಾದ ಮದಗ ಹೊಂದಿರುವ ಬೆದ್ರಂಪಳ್ಳ ಆಸುಪಾಸು ಕೆಂಪುಕಲ್ಲಿನ ಕ್ವಾರಿಗಳು ವ್ಯಾಪಕವಾಗಿ ಕಾರ್ಯಾಚರಿಸುತ್ತಿವೆ. ಇಲ್ಲಿಂದ ನಿರಂತರ ಮಣ್ಣುಮಿಶ್ರಿತ ನೀರು ಕೆಳಭಾಗದಲ್ಲಿರುವ ಮದಗ ಸೇರಿಕೊಂಡು, ಕೆಲವೇ ವರ್ಷದಲ್ಲಿ ಮದಗ ಮುಚ್ಚಿಹೋಗುವ ಭೀತಿ ಎದುರಾಗಿದೆ. ವಯನಾಡಿನಂತಹ ಪ್ರಾಕೃತಿಕ ವಿಕೋಪಗಳಿಂದ ಪಾಠ ಕಲಿಯದ ನಮ್ಮ ಆಡಳಿತ ವ್ಯವಸ್ಥೆ ಬೇಕಾಬಿಟ್ಟಿಯಾಗಿ ಭೂಮಿಯನ್ನು ಬಗೆಯಲು ಅನುಮತಿ ನೀಡುತ್ತಿರುವುದು ಭೀತಿ ತಂದೊಡ್ಡುತ್ತಿದೆ.
ಕೆಂಪುಕಲ್ಲಿನ ಕ್ವಾರಿಗಳಿಂದ ನಿರಂತರ ಭೀತಿ ಎದುರಾಗುತ್ತಿದೆ. ಅನಧಿಕೃತ ಕೆಂಪುಕಲ್ಲಿನ ಕ್ವಾರಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಈಗಾಗಲೇ ಎಣ್ಮಕಜೆ ಗ್ರಾಮಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಅನಧಿಕೃತ ಕ್ವಾರಿಗಳಿಗೆ ತಡೆಯೊಡ್ಡಿ, ಪರಿಸರ ಸಂರಕ್ಷಿಸುವಂತೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹಕ್ಕೂ ಊರಿನ ಜನತೆ ಸಿದ್ಧರಾಗಿದ್ದಾರೆ. - ಪುರುಷೋತ್ತಮ ನಾಯಕ್ ಖಂಡಿಗೆ, ಸಂತ್ರಸ್ತ ಪ್ರದೇಶದ ನಿವಾಸಿ ಕಾಸರಗೋಡು ಜಿಲ್ಲೆಯಲ್ಲಿ ಕೆಂಪುಕಲ್ಲು ಕ್ವಾರಿಗಳಿಗೆ ಪರವಾನಗಿ ನೀಡಲಾಗುತ್ತಿಲ್ಲ. ಜಿಲ್ಲೆಯಲ್ಲಿ ಕೆಂಪುಕಲ್ಲುಗಳು ಚಟುವಟಿಕೆ ನಡೆಯುತ್ತಿದ್ದರೆ, ಅವುಗಳನ್ನು ಅನಧಿಕೃತ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಅನಧಿಕೃತ ಕ್ವಾರಿಗಳ ಪತ್ತೆಗಾಗಿ ಪ್ರತ್ಯೇಕ ತಪಾಸಣಾ ತಂಡ ಕಾರ್ಯಾಚರಿಸುತ್ತಿದೆ. ಪಾರಂಪರಿಕ ಹಳ್ಳಗಳನ್ನೂ ಬಿಡದೆ ಗಣಿಗಾರಿಕೆ ನಡೆದಿದ್ದಲ್ಲಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗುವುದು. - ಕೆ.ಕೆ ವಿಜಯಾ, ಜಿಲ್ಲಾ ಅಧಿಕಾರಿ, ಗಣಿ ಮತ್ತು ಭೂಗರ್ಭ ಇಲಾಖೆ ಕಾಸರಗೋಡು