

ದೇವದುರ್ಗ: ಹೆಣ್ಣು ಸೋಂಕಿತ ಈಡೀಸ್ ಸೊಳ್ಳೆ ಕಚ್ಚುವಿಕೆಯಿಂದ ಡೆಂಘೆ ಜ್ವರ ಹರಡುತ್ತದೆ. ಜನರು ರೋಗದ ಬಗ್ಗೆ ಭಯ ಪಡದೆ ಎಚ್ಚರಿಕೆವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಸೊಳ್ಳೆ ಕಡಿತದಿಂದ ರೋಗ ಹರಡುತ್ತದೆ. ಇದ್ದಕಿದ್ದಂತೆ ತೀವ್ರತರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು,
ವಾಕರಿಕೆ, ವಾಂತಿ ಹಾಗೂ ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳಾಗಿದ್ದು, ಕಂಡುಬಂದದರೆ ತಕ್ಷಣ ರಕ್ತ ಪರೀಕ್ಷೆ ಮಾಡಿಸಿ ರೋಗ ದೃಢಪಟ್ಟಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು. ಡೆಂಘೆ ಜ್ವರಕ್ಕೆ ಯಾವುದೇ ತರಹದ ಸೂಕ್ತ ಚಿಕಿತ್ಸೆ ಮತ್ತು ಔಷಧ ಇಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು.
ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಬೇಗ ಗುಣವಾಗಬಹುದು. ಸೊಳ್ಳೆಗಳ ನಿಯಂತ್ರಣಕ್ಕೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಸ್ವಚ್ಛತೆ ಕಾಪಾಡಿದರೆ ರೋಗದಿಂದ ದೂರವಿರಬಹುದು ಎಂದರು.
ಸಾಂಕ್ರಾಮಿಕ ರೋಗತಜ್ಞ ಡಾ.ತ್ಯಾಗರಾಜ, ಎಇಒ ರಾಜೀವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಬಿಎಚ್‌ಇಒ ಗೀತಮ್ಮ, ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚನ್ನಬಸಯ್ಯ ಹಿರೇಮಠ, ಶಾರೋನ್, ವೆಂಕಟೇಶ್ ನಾಯಕ, ಸುದೀಪ್ ಕುಮಾರ, ಮಂಜುಳಾ. ರಾಚನಗೌಡ, ಕಲಾವತಿ, ಐಶ್ವರ್ಯ, ಆಶಾ ಕಾರ್ಯಕರ್ತೆಯರಾದ ಸುಮಿತ್ರಾ, ದೀಪಿಕಾ, ದೀಪಾ, ತಾಯಮ್ಮ, ರೇಣುಕಾ, ಶ್ರುತಿ, ಶಾಂತಮ್ಮ, ನಾಗಮ್ಮ, ಭೀಮಮ್ಮ, ರೇಖಾ, ಮಹ್ಮದಿ, ಸುಜಾತಾ ಇತರರಿದ್ದರು.