ಪೂರಕ ವಾತಾವರಣ ಹಿನ್ನೆಲೆ: ವಾಡಿಕೆ ಮುನ್ನ ರಾಜ್ಯಕ್ಕೆ ಮುಂಗಾರು ಪ್ರವೇಶ?

mansoon
Published on

ಬೆಂಗಳೂರು:ಈ ಬಾರಿ ವಾಡಿಕೆಗಿಂತ ಮುನ್ನವೇ ನೈಋತ್ಯ ಮಾನ್ಸೂನ್​(ಮುಂಗಾರು) ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ.

ಕೇರಳಕ್ಕೆ ಮೇ 28ರಂದು ಪ್ರವೇಶಿಸುವ ಮಾರುತಗಳು ಬಲವಾಗಿದ್ದರೆ ಅದೇ ದಿನದಂದು ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿವೆ.ಮಾರುತಗಳು ದುರ್ಬಲವಾಗಿದ್ದರೆ ಒಂದೆರೆಡು ದಿನದಲ್ಲಿ ರಾಜ್ಯಕ್ಕೆ ಬರಲಿವೆ.

ವಾಡಿಕೆಯಂತೆ ಜೂ.1ರಂದು ಮುಂಗಾರು ಪ್ರವೇಶಿಸುತ್ತದೆ. ಆದರೆ, ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಲ್ಲಿ ಮೇ 19ರಿಂದ ಮಾನ್ಸೂನ್​ ಆರಂಭಕ್ಕೆ ಈಗಾಗಲೇ ಪೂರಕ ವಾತಾವರಣ ಉಂಟಾಗಿದೆ. ಆದ್ದರಿಂದ,ಮಾನ್ಸೂನ್​ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಈ ಬಾರಿ ಮುಂಗಾರು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಜೂ 1ರಿಂದ ಸೆ.30ರವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ಜೂನ್​ನಲ್ಲಿ ವಾಡಿಕೆಯಷ್ಟೇ ಸುರಿದರೆ, ಜುಲೈನಿಂದ ಅಧಿಕವಾಗಿ ಸುರಿಯಲಿದೆ. ಕಳೆದ ವರ್ಷ "ಲಾ-ನಿನಾ' ಪರಿಣಾಮದಿಂದ ಉತ್ತಮ ಮಳೆಯಾಗಿತ್ತು. ಈ ಬಾರಿಯೂ ಫೆಸಿಫಿಕ್​ ಮತ್ತು ಹಿಂದು ಮಹಾಸಾಗರದಲ್ಲಿ "ಲಾ-ನಿನಾ' ತಟಸ್ಥವಾಗಿದೆ. ಹಿಂದು ಮಹಸಾಗರದ ದ್ವಿಧ್ರುವಿ (ಐಒಸಿ) ಪರಿಸ್ಥಿತಿಯೂ ತಟಸ್ಥವಾಗಿದೆ. ಈ ಎಲ್ಲ ಕಾರಣಗಳಿಂದ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾದರೆ, ಕರಾವಳಿ ಹಾಗೂ ದಣ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ತುಸು ಅಧಿಕ ವರ್ಷಧಾರೆಯಾಗಲಿದೆ.2023-24ರಲ್ಲಿ ಎಲ್​ ನಿನೋ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net