ಪೊಲೀಸರಿಗೆ ದೂರು ಕೊಟ್ರು ಸಿ.ಡಿ. ಲೇಡಿಯ ಡ್ಯಾಡಿ; ಮಗಳನ್ನು ಯಾರೋ ಅಪಹರಿಸಿದ್ದಾರೆ, ದಯವಿಟ್ಟು ಪತ್ತೆ ಮಾಡಿ ರಕ್ಷಿಸಿ ಎಂದು ಮನವಿ

cd girl_new
Published on

ಬೆಳಗಾವಿ: ಸೆಕ್ಸ್​ ಸಿಡಿ ಪ್ರಕರಣವೊಂದರಲ್ಲಿ ತಳುಕು ಹಾಕಿಕೊಂಡಿದ್ದಾಳೆ ಎನ್ನಲಾಗಿರುವ ಯುವತಿಯ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದ್ದು, ಆಕೆಯನ್ನು ಯಾರೋ ಅಪಹರಿಸಿದ್ದಾರೆ, ಆದಷ್ಟು ಬೇಗ ಪತ್ತೆ ಮಾಡಿ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾತ್ರವಲ್ಲ ಆ ಸಿ.ಡಿ. ಪ್ರಕರಣಕ್ಕೂ ತಮ್ಮ ಮಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮವೊಂದರ ಮಾಜಿ ಯೋಧರೊಬ್ಬರು ಈ ಕುರಿತು ಬೆಳಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾನು ಸೇನೆಯಿಂದ ನಿವೃತ್ತನಾಗಿದ್ದು, ಬ್ಯಾಂಕ್​ವೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಮೂವರು ಮಕ್ಕಳಿದ್ದು, ಆ ಪೈಕಿ ಒಬ್ಬಳು ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಅಲ್ಲಿಯೇ ಉದ್ಯೋಗದಲ್ಲಿದ್ದು, ಆಗಾಗ ಊರಿಗೆ ಬಂದು ಹೋಗುತ್ತಿದ್ದಳು.

ಕೆಲವು ದಿನಗಳ ಹಿಂದೆ ಒಂದು ವಿಡಿಯೋ ಸಿ.ಡಿ.ಯಲ್ಲಿ ತಮ್ಮ ಮಗಳನ್ನೇ ಹೋಲುವಂಥ ಯುವತಿಯೊಬ್ಬಳು ಒಬ್ಬ ವ್ಯಕ್ತಿಯೊಂದಿಗೆ ಅಶ್ಲೀಲವಾಗಿ ಇರುವಂಥದ್ದು ಸಾಮಾಜಿಕ ಮಾಧ್ಯಮ ಹಾಗೂ ಇತರ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಅದನ್ನು ನೋಡಿ ಗಾಬರಿಯಾಗಿ ತಾವು ಮಗಳನ್ನು ವಿಚಾರಿಸಿದಾಗ, ಆಕೆ ಅದೊಂದು ನಕಲಿ ಸಿ.ಡಿ., ಎಡಿಟ್ ಮಾಡಿ ತನ್ನ ಮುಖ ಹಾಗೂ ಧ್ವನಿಗೆ ತಾಳೆ ಆಗುವಂತೆ ಮಾಡಲಾಗಿದೆ, ಆ ಮೂಲಕ ತನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡಿರುವುದಾಗಿ ಹೇಳಿದ್ದಾಳೆ. ಬಳಿಕ ಊರಿಗೆ ಬರಲು ಹೇಳಿದರೆ, ಆ ವಿಡಿಯೋ ನಕಲಿ ಎಂದು ಸಾಬೀತಾದ ಮೇಲೆ ಬರುವುದಾಗಿ ಹೇಳಿದ್ದಳು ಎಂದು ಅವರ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವಳು ಮಾತನಾಡಿರುವ ವಿಡಿಯೋ ಬಹಿರಂಗಗೊಂಡಿದೆ. ಅದರಲ್ಲಿ ಅವಳು ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ನಾವು ಕೂಡ ಆತ್ಮಹತ್ಯೆಗೆ ಮುಂದಾಗಿದ್ದನ್ನು ಹೇಳಿದ್ದಳು. ಅವಳಿಗೆ ಮನೆಗೆ ಬಂದು ಬಿಡು ಎಂದು ಹೇಳಿದಾಗ ಅವಳು, ಈಗ ನಾನು ಏನೂ ಹೇಳುವ ಸ್ಥಿತಿಯಲ್ಲಿಲ್ಲ, ನಾನು ಎಲ್ಲಿದ್ದೇನೆ ಎಂಬುದೂ ನನಗೆ ಗೊತ್ತಿಲ್ಲ, ವಾಪಸ್ ಮನೆಗೆ ಬಂದಮೇಲೆ ಎಲ್ಲವನ್ನೂ ಹೇಳುವುದಾಗಿ ಭಯಪಡುತ್ತ ತಿಳಿಸಿದ್ದಳು. ಮಗಳು ಅವಳಾಗೇ ಬರುತ್ತಾಳೆ ಎಂದು ಕಾದು, ಈಗ ಅವಳ ಪತ್ತೆ ಇಲ್ಲದ್ದರಿಂದ ಭಯದಿಂದ ದೂರು ನೀಡುತ್ತಿದ್ದೇನೆ. ಏಳೆಂಟು ದಿನಗಳಿಂದ ಅವಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವಳನ್ನು ಯಾರೋ ಅಪಹರಿಸಿ ಅವಳನ್ನು ಬೆದರಿಸಿ ಮಾತನಾಡಿಸಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಮಗಳ ಜೀವಕ್ಕೆ ಅಪಾಯವಿದೆ, ಬೆಂಗಳೂರಿಗೆ ಹೋಗಿ ದೂರು ನೀಡಲು ನನಗೂ ಜೀವಭಯವಿದೆ. ಹೀಗಾಗಿ ಆದಷ್ಟು ಬೇಗ ನನ್ನ ಮಗಳನ್ನು ಪತ್ತೆ ಮಾಡಿ, ರಕ್ಷಿಸಿ ನಮಗೆ ಒಪ್ಪಿಸಬೇಕು ಎಂಬುದಾಗಿ ಮಾಜಿ ಯೋಧ ಕಂ ಕ್ಲರ್ಕ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ತಮ್ಮ ಪುತ್ರಿಯ ಕುರಿತಾಗಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net