ಸಾಕಲು ಕಷ್ಟವಾಗುತ್ತಿದೆ ಎಂದು ಮಗನನ್ನು ಕೆರೆಗೆ ಎಸೆದು ಕೊಂದ ಕ್ರೂರಿ

Accused
Published on

ಮೈಸೂರು: ಸಾಕಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಒಂದೂವರೆ ವರ್ಷದ ಮಗನನ್ನು ಕೆರೆಗೆ ಎಸೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಮಾಕೋಡಿನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಗಣೇಶ್​ (30) ಎಂಬಾತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಪಿರಿಯಾಪಟ್ಟಣ ಮೂಲದ ಆರೋಪಿ ಗಣೇಶ್​ಗೆ 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮೀ ಎಂಬುವವರ ಜತೆ ಮದುವೆಯಾಗಿತ್ತು. ದೇವನಹಳ್ಳಿಯಲ್ಲಿ ವಾಸವಿದ್ದ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದು, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾರೆ.

ಲಕ್ಷ್ಮೀ ಮೃತಪಟ್ಟ ಬಳಿಕ ಇಬ್ಬರು ಹೆಣ್ಣುಮಕ್ಕಳನ್ನು ತಾಯಿ ಅಂಜನಮ್ಮ ಬಳಿ ಬಿಟ್ಟಿದ್ದ ಗಣೇಶ್ ಪುತ್ರ ಕುಮಾರ್​ನನ್ನು ಬೆಂಗಳೂರಿಗೆ ಕರೆದುಕೊಂಡ ಹೋಗಿದ್ದ. ಕೆಲ ದಿನಗಳ ಬಳಿಕ ಊರಿಗೆ ವಾಪಸ್​ ಆಗಿದ್ದ ಗಣೇಶ್​ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದನ್ನು. ನಾಲ್ಕು ದಿನಗಳ ಹಿಂದೆ ಆರೋಪಿ ತನ್ನ ತಾಯಿಯೊಂದಿಗೆ ವಿಚಾರ ಒಂದಕ್ಕೆ ಜಗಳವಾಡಿದ್ದು, ಕೋಪದಲ್ಲಿ ತನ್ನ ಮಗನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾನೆ.

ಬಳಿಕ ಊರಿನ ಮುಂಭಾಗದಲ್ಲಿರುವ ಕೆರೆಗೆ ಮಗನನ್ನು ಎಸೆದು ಪರಾರಿಯಾಗಿದ್ದಾನೆ. ನೀರಿನಲ್ಲಿ ಮಗುವಿನ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಶವವನ್ನು ಹೊರತೆಗೆದಿದ್ದಾರೆ. ಆರೋಪಿಯ ಅತ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ತನ್ನ ಮಗನನ್ನು ಸಾಕಲು ಆಗದ ಕಾರಣ ಕೆರೆಗೆ ಎಸೆದು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net