

ಪಿರಿಯಾಪಟ್ಟಣ: ಕುಡಿಯುವ ನೀರಿನಲ್ಲಿನ ರಾಸಾಯನಿಕ ಮಿಶ್ರಣಗಳಿಂದ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ ಹೇಳಿದರು.
ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಕಾರ್ಯಕ್ರಮದಡಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ನೀರಿನಲ್ಲಿ ವಿಷಪೂರಿತ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ಇಂತಹ ನೀರನ್ನು ಸೇವಿಸಿದಾಗ ದೇಹದ ಆರೋಗ್ಯದಲ್ಲಿ ಪ್ರತಿಕೂಲ ಪರಿಣಾಮಗಳು ಉಂಟಾಗಿ ಗುಣಪಡಿಸಲು ಆಗದಂತಹ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದರು.
ಫ್ಲೋರೋಸಿಸ್ ಹಲ್ಲು ಮತ್ತು ಮೂಳೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿ ಮಣ್ಣಿನಂತೆ ಪುಡಿಯಾಗುತ್ತದೆ. ಮೂಳೆಗಳು ವಕ್ರವಾಗಿ ತಿರುಗುತ್ತವೆ ಎಂದು ತಿಳಿಸಿದರು. ಫ್ಲೋರೋಸಿಸ್ ಎಂದರೆ ಫ್ಲೋರೈಡ್ ಅಂಶದಿಂದ ದೇಹದಲ್ಲಿ ಉಂಟಾಗುವ ಒಂದು ಅನಾರೋಗ್ಯದ ಬೆಳವಣಿಗೆಯಾಗಿದ್ದು, ನಮಗೆ ಅರಿವಿಲ್ಲದಂತೆ ಪ್ಲೋರೈಡ್ ಅಂಶ ನಮ್ಮ ದೇಹವನ್ನು ಸೇರುವುದರಿಂದ ಪ್ಲೋರೋಸಿಸ್ ಕಾಯಿಲೆ ಬರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರು, ಆಹಾರ, ಕೆಲವು ಔಷಧಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳಿನಿಂದ ಪ್ಲೋರೈಡ್ ಅಂಶ ನಮ್ಮ ದೇಹದೊಳಗೆ ಪ್ರವೇಶಿಸಲಿದ್ದು, ಮಕ್ಕಳಲ್ಲಿ ಆರಂಭಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವುದರಿಂದ ನಿವಾರಣೆ ಸಾಧ್ಯ ಎಂದು ಮಾಹಿತಿ ನೀಡಿದರು.
ಆಂಜನೇಯ ಕಲಾತಂಡದ ಸದಸ್ಯರು ಬೀದಿ ನಾಟಕ ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಆರೋಗ್ಯ ಇಲಾಖೆಯ ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಶಾಂತಕುಮಾರಿ, ಸಿಬ್ಬಂದಿ ಹೇಮಾ, ರೇಖಾ, ಆಂಜನೇಯ, ಕಲಾತಂಡದ ಸದಸ್ಯರಾದ ಸವಿತಾ, ಸಲ್ಮಾ, ವಸಂತಾ ಇತರರು ಇದ್ದರು.