

ಹಾವೇರಿ: ರೈತರ ಉತ್ಪನ್ನಗಳ ಮಾರಾಟಕ್ಕೆ ಕರೊನಾ ಲಾಕ್ಡೌನ್ ಅನ್ವಯವಾಗುವುದಿಲ್ಲ. ರೈತರ ಉತ್ಪನ್ನಗಳನ್ನು ಖರೀದಿಸಲು ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಆರಂಭಿಸುವಂತೆ ಸರ್ಕಾರ ಆದೇಶಿಸಿದ್ದರೂ ಹಾವೇರಿ ಎಪಿಎಂಪಿಯಲ್ಲಿ ಇನ್ನೂ ವಹಿವಾಟು ಆರಂಭವಾಗಿಲ್ಲ. ಇದರ ಪರಿಣಾಮ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.
ಜಿಲ್ಲೆಯ ರೈತರು ಮುಂಗಾರು ಹಂಗಾಮಿನಲ್ಲಿ ನೆರೆ, ಅತಿವೃಷ್ಟಿ ಹೊಡೆತಕ್ಕೆ ಸಿಲುಕಿದ್ದರು. ರೈತರಿಗೆ ಹಿಂಗಾರು ಹಂಗಾಮು ಸ್ವಲ್ಪ ಕೈ ಹಿಡಿದಿತ್ತು. ಅಲ್ಲದೆ, ಅತಿವೃಷ್ಟಿಯಿಂದ ಬೆಳೆ ಹಾಳಾದ ನಂತರ ಅದನ್ನು ತೆಗೆದು ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ಫೆಬ್ರವರಿ ಅಂತ್ಯಕ್ಕೆ ಬೆಳೆಯೆಲ್ಲ ಕೊಯ್ಲು ಮಾಡಿಕೊಂಡ ರೈತರು ಮಾರಾಟಕ್ಕೆ ಸಿದ್ಧರಾಗಿದ್ದರು. ಆ ಸಮಯದಲ್ಲಿ ಮೆಕ್ಕೆಜೋಳದ ಬೆಲೆ ಕುಸಿತ ಕಂಡಿದ್ದರಿಂದ ಮಾರಾಟಕ್ಕೆ ವಿಳಂಬ ಮಾಡಿದ್ದರು. ಇದೀಗ ಕರೊನಾ ಲಾಕ್ಡೌನ್ ಆಗಿದ್ದರಿಂದ ಕಳೆದೊಂದು ತಿಂಗಳಿನಿಂದ ಫಸಲು ಮಾರಾಟಕ್ಕೆ ತೆರೆ ಬಿದ್ದಿದೆ. ಮನೆಯಲ್ಲಿ ಸಂಗ್ರಹಿಸಿರುವ ಮೆಕ್ಕೆಜೋಳ, ಹತ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳಬೇಕಿದೆ. ಆದರೆ, ಎಪಿಎಂಸಿಗಳು ಸಂಪೂರ್ಣ ಸ್ಥಗಿತಗೊಂಡಿರುವ ಪರಿಣಾಮ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಮುಂಗಾರು ಬಿತ್ತನೆಗೆ ಹಣಕ್ಕಾಗಿ ಪರದಾಡುವಂತಾಗಿದೆ.
ಬಂದ್ ಆಗಿರುವ ಎಪಿಎಂಸಿ: ಲಾಕ್ಡೌನ್ ನಡುವೆಯೂ ಬೇರೆಬೇರೆ ಎಪಿಎಂಸಿಗಳು ವಹಿವಾಟು ಆರಂಭಿಸಿವೆ. ಆದರೆ, ಹಾವೇರಿಯ ಮಾರುಕಟ್ಟೆ ಬಂದ್ ಆಗಿದೆ. ಹೀಗಾಗಿ ರೈತರು ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಜೋಳ, ಹೆಸರುಕಾಳು, ಅವರೆಕಾಳು, ಔಡಲ, ತೊಗರಿ ಸೇರಿ ಇತರೆ ಕಾಳುಕಡಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಎಪಿಎಂಸಿಯಲ್ಲಿ ಅಧಿಕಾರಿಗಳು, ವರ್ತಕರ ಸಭೆ ನಡೆಸಿ ವಹಿವಾಟು ಆರಂಭಿಸುವ ಕುರಿತು ರ್ಚಚಿಸಲಾಗಿದೆ. ಆಗ ವರ್ತಕರು ನಾವು ವಹಿವಾಟು ಆರಂಭಿಸಲು ಸಿದ್ಧರಿದ್ದೇವೆ. ಆದರೆ, ರೈತರು ಬರಬೇಕಲ್ಲ ಎಂದಿದ್ದರು. ಅಧಿಕಾರಿಗಳು ವಹಿವಾಟು ಆರಂಭಿಸಿರುವ ಕುರಿತು ಮಾಹಿತಿ ದೊರೆತರೆ ರೈತರು ಬರುತ್ತಾರೆ. ನೀವು ಮಾರುಕಟ್ಟೆ ಆರಂಭಿಸಿ ಎಂದು ಸೂಚನೆ ನೀಡಿದ್ದರು. ಆದರೂ ವರ್ತಕರ್ಯಾರು ಅಂಗಡಿಗಳನ್ನು ಆರಂಭಿಸಿಲ್ಲ. ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
ಕಾಳುಕಡಿ ಮಾರುಕಟ್ಟೆಯಲ್ಲಿ ಕೆಲ ಅಂಗಡಿಗಳು ಆರಂಭವಿದ್ದರೂ ಮಾರಾಟ ಮಾಡಲು ರೈತರು ಬರುತ್ತಿಲ್ಲ. ಉತ್ಪನ್ನ ಮಾರಾಟ ಮಾಡಲು ರೈತರು ಓಡಾಡಬಹುದು ಎಂದು ಸರ್ಕಾರವೇ ಹೇಳಿದ್ದರೂ ಪೊಲೀಸರ ಭಯದಿಂದ ರೈತರು ಮನೆಯಿಂದ ಹೊರ ಬರುತ್ತಿಲ್ಲ. ಹೀಗಾಗಿ ಕಾಳುಕಡಿ ವ್ಯಾಪಾರವೂ ಸರಿಯಾಗಿ ನಡೆಯುತ್ತಿಲ್ಲ ಎಂದು ವರ್ತಕರೊಬ್ಬರು ತಿಳಿಸಿದರು.
ಏರಿಕೆ ಕಾಣದ ಮೆಕ್ಕೆಜೋಳದ ಬೆಲೆ: ರೈತರು ಕಷ್ಟಪಟ್ಟು ಬೆಳೆದಿರುವ ಮೆಕ್ಕೆಜೋಳದ ಬೆಲೆ ಲಾಕ್ಡೌನ್ ನಂತರ ಮತ್ತಷ್ಟು ಕುಸಿತವಾಗಿದೆ. ಇದರಿಂದಲೂ ರೈತರು ಕಂಗಾಲಾಗಿದ್ದಾರೆ. ಕ್ವಿಂಟಾಲ್ಗೆ 2 ಸಾವಿರ ರೂ. ಗೆ ಮಾರಾಟವಾಗುತ್ತಿದ್ದ ಮೆಕ್ಕೆಜೋಳದ ಬೆಲೆ ಈಗ 1 ಸಾವಿರಕ್ಕೆ ಬಂದಿದೆ. ಬೆಲೆ ಕುಸಿತದಿಂದ ಹೈರಾಣಾಗಿರುವ ರೈತರು ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದೀತೇ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
ಇತ್ತೀಚೆಗೆ ವರ್ತಕರ ಸಭೆ ನಡೆಸಿ ಲಾಕ್ಡೌನ್ ಇದ್ದರೂ ಎಪಿಎಂಸಿಯಲ್ಲಿ ರೈತರ ಉತ್ಪನ್ನ ಖರೀದಿ ಹಾಗೂ ಸಾಗಾಟಕ್ಕೆ ಅನುಮತಿಯಿದೆ. ವಹಿವಾಟು ಆರಂಭಿಸುವಂತೆ ವರ್ತಕರಿಗೆ ಸೂಚಿಸಲಾಗಿದೆ. ಗುರುವಾರದಿಂದ ಹತ್ತಿ, ಮೆಕ್ಕೆಜೋಳ ಖರೀದಿ ಮಾರುಕಟ್ಟೆ ಆಂಭಿಸುವುದಾಗಿ ತಿಳಿಸಿದ್ದಾರೆ. ವರ್ತಕರಿಗೆ ಇನ್ನೊಮ್ಮೆ ಸೂಚನೆ ನೀಡುತ್ತೇವೆ.| ಮನೋಹರ ರ್ಬಾ, ಉಪ ಕಾರ್ಯದರ್ಶಿ, ಎಪಿಎಂಸಿ ಹಾವೇರಿ