ರೈಲ್ವೆ ಯೋಜನೆಯಿಂದ ರೈತರಿಗೆ ಅನ್ಯಾಯವಾಗದು

ರೈಲ್ವೆ ಯೋಜನೆಯಿಂದ ರೈತರಿಗೆ ಅನ್ಯಾಯವಾಗದು
Published on

ಸಕಲೇಶಪುರ: ಚಿಕ್ಕಮಗಳೂರು-ಆಲೂರು ರೈಲ್ವೆ ಯೋಜನೆಯಿಂದ ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯವಾಗದು ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ. ಶೃತಿ ಹೇಳಿದರು.

ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿ ಅವರಣದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಭಾಗವಹಿಸಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿ, ಯೋಜನೆಯಿಂದ ಭೂಮಿ ಕಳೆದು ಕೊಳ್ಳುವ ಯಾವುದೆ ರೈತರಿಗೂ ಯಾವ ಹಂತದಲ್ಲೂ ಅನ್ಯಾಯವಾಗುವುದಿಲ್ಲ. ಗೋಮಾಳ ಜಮೀನಿಗೆ ಪರಿಹಾರ ನೀಡುವುದಿಲ್ಲ, ಗೋಮಾಳದಲ್ಲಿ ಮನೆ ಕಟ್ಟಿದ್ದರೆ ಪರಿಹಾರ ನೀಡಲಾಗುವುದು. ಪಹಣಿಯಲ್ಲಿ ಇರುವ ನಮೂದಾಗಿರುವ ರೈತರಿಗೆ 2013 ಭೂಸುಧಾರಣೆ ಕಾಯ್ದೆಯಂತೆ ಪರಿಹಾರ ನೀಡಲಾಗುವುದು. ಪರಿಹಾರದ ಮೊತ್ತವನ್ನು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಭೆ ನಿರ್ಣಯಿಸಲಿದ್ದು 3 ವರ್ಷದಲ್ಲಿ ಗ್ರಾಮದಲ್ಲಿ ನಡೆದಿರುವ ಭೂಪರಭಾರೆಯಂತೆ ಪರಿಹಾರದ ಹಣ ನಿಗದಿಯಾಗಲಿದೆ. ಭೂಮಿ ಸಂಬಂಧ ಯಾವುದೇ ಸಮಸ್ಯೆಗಳಿದ್ದರು ನಮ್ಮ ಕಚೇರಿಗೆ ದೂರು ಸಲ್ಲಿಸಲು ಸಾಕಷ್ಟು ಸಮಯಾವಕಾಶವಿದೆ ಎಂದರು.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಭೂಮಿ ವಶಪಡಿಸಿಕೊಂಡು ಪರಿಹಾರ ನೀಡಲಾಗಿದೆ. ಸದ್ಯ ಬೇಲೂರು ಹಾಗೂ ಆಲೂರು ತಾಲೂಕಿನ ಭೂಮಿ ಸ್ವಾಧೀನ ಕೆಲಸ ಆರಂಭವಾಗಿದ್ದು ಬೇಲೂರು ಗಡಿಯಿಂದ ಆಲೂರು ಪಟ್ಟಣದವರಗಿನ 34 ಕಿ.ಮೀ. ಉದ್ದದ ರೈಲ್ವೆ ರಸ್ತೆ ನಿರ್ಮಾಣಕ್ಕೆ ಬೇಲೂರು ತಾಲೂಕಿನ 14 ಗ್ರಾಮಗಳ 268 ಎಕರೆ ಹಾಗೂ ಆಲೂರು ತಾಲೂಕಿನ 13 ಗ್ರಾಮಗಳಲ್ಲಿ 271 ಎಕರೆ ಜಮೀನು ವಶಕ್ಕೆ ಪಡೆಯಲಾಗುತಿದ್ದು, ಭೂ ಸ್ವಾಧೀನಕ್ಕೆ ಸಂಬಂಧ 110 ತಕರಾರು ಅರ್ಜಿಗಳು ಸ್ವೀಕೃತವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net