

ರಾಣೆಬೆನ್ನೂರ: ಕಾಲುವೆ ನಿರ್ವಣಕ್ಕೆಂದು ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರ ನೀಡದೇ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ರೋಸಿ ಹೋದ ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ ರೈತರು, ತುಂಗಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮುಂದಾದ ಘಟನೆ ನಗರದಲ್ಲಿ ನಡೆದಿದೆ.
ಪರಿಹಾರಕ್ಕಾಗಿ ಅಲೆದಾಡಿ ಸುಸ್ತಾಗಿ ಹೋಗಿದ್ದೇವೆ. ಆದ್ದರಿಂದ ಕೂಡಲೆ ಪರಿಹಾರ ನೀಡದಿದ್ದರೆ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿ, ನೇಣು ಬಿಗಿದುಕೊಳ್ಳಲು ಹಗ್ಗ ಕಟ್ಟಿ ನಿಂತರು. ಈ ವೇಳೆ ಕೂಡಲೆ ಸ್ಥಳಕ್ಕೆ ಬಂದ ಹಲಗೇರಿ ಠಾಣೆ ಪಿಎಸ್ಐ ಸಿದ್ಧಾರೂಢ ಬಡಿಗೇರ, ‘ಕಚೇರಿಯಲ್ಲಿ ಯಾವುದೇ ಅಧಿಕಾರಿಗಳಿಲ್ಲ. ಎಲ್ಲರೂ ಬೆಂಗಳೂರಿಗೆ ಮೀಟಿಂಗ್ ಸಲುವಾಗಿ ಹೋಗಿದ್ದಾರೆ. 23ರಂದು ಬರುತ್ತಾರೆ. ನೀವೂ ಬನ್ನಿ, ಸಮಸ್ಯೆ ಬಗೆಹರಿಸೋಣ’ ಎಂದು ರೈತರನ್ನು ಸಮಾಧಾನ ಪಡಿಸಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರೈತ ಪ್ರಭುಗೌಡ ಸೊರಟೂರ ಮಾತನಾಡಿ, ಶಿರಗಂಬಿ ಗ್ರಾಮದ 200ಕ್ಕೂ ಅಧಿಕ ರೈತರ 257.7 ಎಕರೆ ಜಮೀನನ್ನು 2002-03ರಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ವಣಕ್ಕೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಈವರೆಗೂ ರೈತರಿಗೆ ನಯಾಪೈಸೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.
ಪರಿಹಾರ ನೀಡುವಂತೆ ಹಾವೇರಿ ಜಿಲ್ಲಾಧಿಕಾರಿ, ಬೆಳಗಾವಿ ಆಯುಕ್ತ ಹಾಗೂ ರಾಜ್ಯ ಸರ್ಕಾರದ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಬಂದಿದ್ದೇವೆ. ಯುಟಿಪಿ ಕಚೇರಿಗೆ ಲೆಕ್ಕವಿಲ್ಲದಷ್ಟು ಬಾರಿ ಬಂದು ಹೋಗಿದ್ದೇವೆ. ಆದರೆ, ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಹೊರತು ಪರಿಹಾರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಕರಬಸಪ್ಪ ಬನ್ನಿಕೋಡ, ನಿಂಗನಗೌಡ ಸೊರಟೂರ, ಕರೇಗೌಡ ಮತ್ತೂರ, ಮಂಜಪ್ಪ ಹೊಳಲ, ರಾಜು ಬಣಕಾರ, ಮಹೇಶಪ್ಪ ಮೈದೂರ, ಕರಬಸಪ್ಪ ಮಾವಿನತೋಪ, ತುಕಾರಾಮ ನವಲೆ, ಕರಿಯಪ್ಪ ಸೂರಣಗಿ, ಯಲ್ಲಪ್ಪ ಕೋಡಿಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.