ಹಾಸ್ಟೆಲ್‌ಗೆ ರೈತಸಂಘ ದಿಢೀರ್ ಭೇಟಿ

25 HANUR 1
ರಾಮಾಪುರ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್‌ಗೆ ರೈತ ಸಂಘದ ಪದಾಧಿಕಾರಿಗಳು ದಿಢೀರ್ ದಾಳಿ ನಡೆಸಿ ನೀರು ಸಂಗ್ರಹಣ ತೊಟ್ಟಿ ಪರಿಶೀಲಿಸಿದರು. ಅಮ್ಜಾದ್‌ಖಾನ್, ಪಳನಿಸ್ವಾಮಿ, ಪ್ರಕಾಶ್, ಮಂಜುನಾಥ್ ಇತರರಿದ್ದರು.
Published on

ಹನೂರು: ವಿದ್ಯಾರ್ಥಿಗಳಲ್ಲಿ ಗುಳ್ಳೆಗಳು (ಅಲರ್ಜಿ) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ರಾಮಾಪುರ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಮಂಗಳವಾರ ತಾಲೂಕು ರೈತ ಸಂಘದ ಪದಾಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಲ್ಲಿನ ಅವ್ಯವಸ್ಥೆಯ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿದರು.

ಹಾಸ್ಟೆಲ್‌ನಲ್ಲಿ ಪ್ರಸ್ತುತ 26 ವಿದ್ಯಾರ್ಥಿಗಳು ದಾಖಲಾಗಿದ್ದು, ಇಲ್ಲಿ ಕುಡಿಯುವ ನೀರು ಶುದ್ಧವಿಲ್ಲ ಹಾಗೂ ಗುಣಮಟ್ಟದ ಆಹಾರದ ಕೊರತೆಯಿಂದ ಇತ್ತೀಚೆಗೆ ಬಹುತೇಕ ಮಕ್ಕಳಲ್ಲಿ ಅಲರ್ಜಿಯಿಂದ ಅಂಗಾಂಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡಿತ್ತು. ಕೆಲ ಪಾಲಕರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಕೆಲ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಬಗ್ಗೆ ಪಾಲಕರು ರೈತ ಸಂಘಟನೆಗೆ ಮಾಹಿತಿ ತಿಳಿಸಿದ್ದರು.

ಹಾಗಾಗಿ, ಮಂಗಳವಾರ ತಾಲೂಕು ರೈತ ಸಂಘದ ಅಮ್ಜಾದ್‌ಖಾನ್, ಉಪಾಧ್ಯಕ್ಷ ಪಳನಿಸ್ವಾಮಿ, ಗೌರವಾಧ್ಯಕ್ಷ ರಾಜಣ್ಣ, ಪದಾಧಿಕಾರಿಗಳಾದ ಬೆಟ್ಟೇಗೌಡ, ಮಹದೇವ, ಚಿನ್ನಸ್ವಾಮಿ ಹಾಗೂ ವೇಲುಸ್ವಾಮಿ ನೇತೃತ್ವದ ತಂಡ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿತು. ಈ ವೇಳೆ ಕುಡಿಯುವ ನೀರು ಸಂಗ್ರಹಣಾ ತೊಟ್ಟಿ, ಪೂರೈಕೆಯಾಗುವ ಟ್ಯಾಂಕ್ ಪರಿಶೀಲಿಸಿದಾಗ ಕಲುಷಿತದಿಂದ ಕೂಡಿರುವುದು ಕಂಡು ಬಂತು. ಕೆಲ ಆಹಾರ ಪದಾರ್ಥದಲ್ಲಿ ಹುಳು ಪತ್ತೆಯಾದವು. ಅಲ್ಲದೆ ಕಿಟಕಿ, ಬಾಗಿಲು ಹದಗೆಟ್ಟಿದ್ದ ಹಿನ್ನೆಲೆ ಹಾಸಿಗೆಯಲ್ಲಿ ಕೋತಿಗಳು ಮಲಗಿರುವುದು ಗಮನಕ್ಕೆ ಬಂತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪದಾಧಿಕಾರಿಗಳು ಸರ್ಕಾರಿ ಪ್ರೌಢಶಾಲೆಗೆ ತೆರಳಿ ವಿದ್ಯಾರ್ಥಿಗಳ ಅಲರ್ಜಿಯ ಬಗ್ಗೆ ವಾಸ್ತವತೆಯನ್ನು ಅರಿತರು. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸುವಂತೆ ಆಕ್ರೋಶ ವ್ಯಕ್ತಪಡಿಸಿ ಹಾಸ್ಟೆಲ್‌ನಲ್ಲಿ ಕಾದು ಕುಳಿತರು.

ಸುದ್ದಿ ತಿಳಿದು ಹಾಸ್ಟೆಲ್ ವಾರ್ಡನ್ ಪ್ರಕಾಶ್ ಆಗಮಿಸಿದ ವೇಳೆ ಅಮ್ಜಾದ್‌ಖಾನ್ ಮಾತನಾಡಿ, ಮಕ್ಕಳಲ್ಲಿ ಅಲರ್ಜಿಗೆ ಕಲುಷಿತ ನೀರು ಕಾರಣವಾಗಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸಿ ನೀರಿನಲ್ಲಿ ಶುಚಿತ್ವ ಕಾಪಾಡಬೇಕು. ಹಾಗೆಯೇ ಹುಳು ಕಾಣಿಸಿಕೊಂಡ ಆಹಾರ ಪದಾರ್ಥವನ್ನು ಬದಲಿಸಬೇಕು. ಕಿಟಕಿ, ಬಾಗಿಲನ್ನು ಸರಿಪಡಿಸಿ ಕೋತಿಗಳು ಲಗ್ಗೆ ಹಾಕದಂತೆ ವ್ಯವಸ್ಥೆಯಾಗಬೇಕು ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ವಾರ್ಡನ್ ಪ್ರಕಾಶ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ 3 ಹಾಸ್ಟೆಲ್ ಜವಾಬ್ದಾರಿ ವಹಿಸಿರುವುದರಿಂದ ಈ ರೀತಿಯ ಸಮಸ್ಯೆಯಾಗಿದೆ. ಆದ್ದರಿಂದ ಈ ಕೂಡಲೇ ಕ್ರಮವಹಿಸಿ ಇನ್ನೆರಡು ದಿನಗಳೊಳಗೆ ಸಮಸ್ಯೆಯನ್ನು ಸರಿಪಡಿಸಲಾಗುವುದು. ಮಕ್ಕಳ ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.

ವೈದ್ಯರಿಂದ ತಪಾಸಣೆ: ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್, ವೈದ್ಯ ಡಾ. ಮನು, ಸಮುದಾಯ ಆರೋಗ್ಯಾಧಿಕಾರಿ ಮಂಜುನಾಥ್ ಅವರು ಮಕ್ಕಳನ್ನು ತಪಾಸಣೆ ನಡೆಸಿ ಅಲರ್ಜಿಗೆ ಸಂಬಂಧಿಸಿದಂತೆ ಮಾತ್ರೆ, ಔಷಧ ನೀಡಿದರು. ನೀರಿನ ಶುಚಿತ್ವ ಕಾಪಾಡಿಕೊಳ್ಳುವಂತೆ ಡಾ. ಪ್ರಕಾಶ್ ವಾರ್ಡನ್‌ಗೆ ಸೂಚಿಸಿದರು. ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net