ವನ್ಯಜೀವಿಗಳ ಹಾವಳಿಯಿಂದ ರೈತರಿಗೆ ಸಂಕಷ್ಟ

08-OCT-GPT-3
Published on

 ಗುಂಡ್ಲುಪೇಟೆ: ಬಂಡೀಪುರ ಕಾಡಂಚಿನ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಬುಧವಾರ ಕುಂದಕೆರೆ ವಲಯದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಕುಂದುಕೊರತೆ ಸಭೆ ನಡೆಸಿದರು.

ರೈತ ಮುಖಂಡ ಕುಂದಕೆರೆ ಸಂಪತ್ತು ಮಾತನಾಡಿ, ಅರಣ್ಯ ಇಲಾಖೆ ಕಾಡಂಚಿನ ರೈತರನ್ನು ಸಂಪೂರ್ಣ ಕಡೆಗಣಿಸುತ್ತಿದೆ. ಹುಲಿ, ಚಿರತೆಗಳು ಜಮೀನುಗಳಲ್ಲಿ ಬೀಡುಬಿಡುತ್ತಿವೆ. ಬೆಳೆ ಕಾವಲಿಗೆ ಜಮೀನುಗಳಿಗೆ ರೈತರು ಹೋಗಲು ಸಾಧ್ಯವಾಗುತ್ತಿಲ್ಲ. ವನ್ಯಜೀವಿಗಳು ಬಂದಿರುವ ಬಗ್ಗೆ ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವನ್ಯಜೀವಿಗಳನ್ನು ತಡೆಗಟ್ಟುವ ಬದಲು ರೈತರ ಮೇಲೆ ದೂರು ನೀಡಲಾಗುತ್ತಿದೆ. ಇದರಿಂದ ರೈತರು ಸಾಲಸೋಲ ಮಾಡಿ ಬೆಳೆದ ಬೆಳೆಗಳು ವನ್ಯಜೀವಿಗಳಿಂದ ನಾಶವಾಗುತ್ತಿದ್ದು ರೈತರು ಹತಾಶರಾಗುತ್ತಿದ್ದಾರೆ. ಹುಲಿ ಚಿರತೆಗಳು 50-60 ಸಾವಿರ ಬೆಲೆ ಬಾಳುವ ಹಸುವನ್ನು ಕೊಂದು ಹಾಕಿದರೆ ಅರಣ್ಯ ಇಲಾಖೆ 30 ಸಾವಿರ ರೂಪಾಯಿ ಮಾತ್ರ ಪರಿಹಾರ ನೀಡುತ್ತಿದೆ. ಹಲವು ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ದಿನವೂ ಬಂಡೀಪುರಕ್ಕೆ ಬರುವ ಪ್ರವಾಸಿಗರಿಂದ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ವಸೂಲಿ ಮಾಡುತ್ತಿರುವ ಪ್ರವೇಶ ಶುಲ್ಕದಿಂದಲೇ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಆದರೂ ಅರಣ್ಯ ಇಲಾಖೆ ಸಂತ್ರಸ್ತ ರೈತರಿಗೆ ತುಂಬ ಕಡಿಮೆ ಪ್ರಮಾಣದಲ್ಲಿ ಪರಿಹಾರ ನೀಡುತ್ತಿದೆ. ಈ ಬಾರಿ ಫೆಬ್ರವರಿಯಿಂದಲೂ ಬೆಳೆ ಹಾಗೂ ಜಾನುವಾರು ನಷ್ಟಕ್ಕೆ ಪರಿಹಾರ ನೀಡಿಲ್ಲ. ಅಧಿಕಾರಿಗಳು ನಿಮ್ಮ ಮನೆಯಿಂದ ತಂದ ಹಣದಿಂದ ರೈತರಿಗೆ ಪರಿಹಾರ ಕೊಡುವಂತೆ ವರ್ತಿಸುತ್ತಿದ್ದೀರಿ, ಅರಣ್ಯ ಇಲಾಖೆ ಅರಣ್ಯ ಸಂರಕ್ಷಣೆ ಮಾಡುವುದು ಬಿಟ್ಟು ಕಾಮಗಾರಿ ಕೈಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಂದಕೆರೆ ವಲಯಾರಣ್ಯಾಧಿಕಾರಿ ನಾಗೇಂದ್ರ ನಾಯ್ಕ ಮಾತನಾಡಿ, ಈ ವರ್ಷ ಅನುದಾನದ ಕೊರತೆಯಿಂದ ಕುಂದಕೆರೆ ವಲಯದಲ್ಲಿ ಸುಮಾರು 14 ಲಕ್ಷ ರೂಪಾಯಿಗಳಷ್ಟು ಪರಿಹಾರ ಬಾಕಿಯಿದೆ. ಸರ್ಕಾರದಿಂದ ಅನುದಾನ ಬಂದ ಕೂಡಲೇ ಎಲ್ಲ ಅರ್ಜಿಗಳಿಗೂ ಪರಿಹಾರ ವಿತರಣೆ ಮಾಡಲಾಗುವುದು. ಯಾವುದೇ ರೈತರು ಕರೆ ಮಾಡಿದರೆ ಕೂಡಲೇ ಸ್ಪಂದಿಸಲಾಗುವುದು. ಅರಣ್ಯ ಸಂರಕ್ಷಣೆಯಲ್ಲಿ ಕಾಡಂಚಿನ ಜನರ ನೆರವು ತುಂಬ ಅಗತ್ಯವಿದ್ದು ಎಂದಿನಂತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ತೆರಕಣಾಂಬಿ ಠಾಣೆಯ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಎಸ್.ಮಹೇಶ್, ಡಿಆರ್‌ಎಫ್‌ಒ ಕಾರ್ತಿಕ್, ಮುಖಂಡ ಸುರೇಂದ್ರ, ಬಸವಣ್ಣ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net