

ಹಿರೇಕೆರೂರ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಬೆಳೆಗಳನ್ನು ರಕ್ಷಿಸಲು ಬೇಕಿರುವ ಯೂರಿಯಾ ರಸಗೊಬ್ಬರ ಸಿಗದೆ ರೈತರು ಪರದಾಡುವ ಸ್ಥಿತಿ ಎದುರಾಗಿದೆ.
ಒಂದೆಡೆ ಮಳೆಯಿಂದ ಹಾಳಾಗುತ್ತಿರುವ, ಹಾಳಾದ ಬೆಳೆ ಮತ್ತೊಂದೆಡೆ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ದೊರಕದ್ದರಿಂದ ರೈತರು ಕಂಗೆಟ್ಟಿದ್ದಾರೆ. ಖಾಸಗಿ ಅಂಗಡಿಗಳಲ್ಲಿ ಯೂರಿಯಾ ದೊರೆತರೂ ಅದು ದುಬಾರಿ ಬೆಲೆಗೆ ಹಾಗೂ 5 ಯೂರಿಯಾ ಗೊಬ್ಬರಕ್ಕೆ ಜಿಂಕ್ ಗೊಬ್ಬರ ಹೊಂದಾಣಿಕೆ ಮಾಡಿ ಒಟ್ಟು 2100 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದು ಗೊತ್ತಿದ್ದರೂ ಕೃಷಿ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ವ್ಯಾಪ್ತಿಯಲ್ಲಿ ಕೃಷಿಗಾಗಿ ಒಟ್ಟು 49,500 ಹೆಕ್ಟೇರ್ ಪ್ರದೇಶ ಬಿತ್ತನೆ ಕ್ಷೇತ್ರ ಮೀಸಲಿದೆ. ಇದರಲ್ಲಿ 44.500 ಹೆಕ್ಟೇರ್ನಲ್ಲಿ ಮೆಕ್ಕೆಜೋಳ, 3600 ಹೆಕ್ಟೇರ್ನಲ್ಲಿ ಹತ್ತಿ ಬೆಳೆ ಬೆಳೆಯಲಾಗಿದೆ. ವಿವಿಧ ಬೆಳೆಗಳು ಸೇರಿ ಈ ವರೆಗೆ 47 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇನ್ನುಳಿದಂತೆ 1 ಸಾವಿರ ಹೆಕ್ಟೇರ್ನಲ್ಲಿ ಭತ್ತ, ಸೋಯಾಬಿನ್ ಹಾಗೂ ಶೇಂಗಾ ಬೆಳೆ ಬಿತ್ತನೆಯಾಗಬೇಕಿದೆ. ಬೇಡಿಕೆಗೆ ತಕ್ಕಂತೆ ತಾಲೂಕಿಗೆ 11300 ಮೆಟ್ರಿಕ್ ಟನ್ ಗೊಬ್ಬರ ಪೂರೈಸಬೇಕಿದೆ. ಅದರಲ್ಲಿ 7.850 ಮೆಟ್ರಿಕ್ ಟನ್ ಗೊಬ್ಬರ ಈಗಾಗಲೇ ಬಂದಿದ್ದು ಅದನ್ನು ರೈತರಿಗೆ ವಿತರಿಸಲಾಗಿದೆ. ರೈತರು ಗೊಬ್ಬರವನ್ನು ಹೆಚ್ಚೆಚ್ಚು ಖರೀದಿಸಿದ್ದು ಹಾಗೂ ಬೇರೆ ತಾಲೂಕಿನವರು ಇಲ್ಲಿಗೆ ಬಂದು ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಂಡಿರುವುದು ಗೊಬ್ಬರ ಕೊರತೆಗೆ ಕಾರಣ ಎನ್ನುತ್ತಿದ್ದಾರೆ ಕೃಷಿ ಅಧಿಕಾರಿಗಳು.
ಪಟ್ಟಣದ ಟಿಎಪಿಸಿಎಂಸ್ ಸೊಸೈಟಿಗಳಲ್ಲಿ ಯೂರಿಯಾ ಗೊಬ್ಬರ ಪೂರೈಕೆಯಾಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಗೊಬ್ಬರ ಬರಲಿದೆ. ಬಂದ ನಂತರವೇ ಸರ್ಕಾರ ನಿಗದಿಪಡಿಸಿದ ದರಕ್ಕೆ ತಕ್ಕಂತೆ ಗೊಬ್ಬರ ಮಾರಾಟ ಮಾಡಲಾಗುವುದು ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಇದರಿಂದ ಆತಂಕಿತರಾದ ರೈತರು, ಗೊಬ್ಬರ ಖರೀದಿಗಾಗಿ ಖಾಸಗಿ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವಂತಾಗಿದೆ. 5 ಯೂರಿಯಾ ಚೀಲಗಳ ಜತೆ ಜಿಂಕ್ ಗೊಬ್ಬರ ಖರೀದಿಸಲೇಬೇಕು. ಇದಕ್ಕೆ ಬರೋಬ್ಬರಿ 2100 ರೂ. ಪಾವತಿಸಬೇಕು ಎಂಬ ಷರತ್ತು ಖಾಸಗಿ ಗೊಬ್ಬರದಂಗಡಿಗಳ ಮಾಲೀಕರದಾಗಿದ್ದು ಇದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
ತಾಲೂಕಿಗೆ ಯೂರಿಯಾ ಗೊಬ್ಬರ ವಿತರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಣ ನೀಡಿದರೂ ಸಾಕಷ್ಟು ಗೊಬ್ಬರ ಸಿಗುತ್ತಿಲ್ಲ. ರಸಗೊಬ್ಬರವನ್ನು ಯಾವುದೇ ಗೊಬ್ಬ್ಬದೊಂದಿಗೆ ಲಿಂಕ್ ಮಾಡದೆ ಸರ್ಕಾರ ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದ ಅನಿವಾರ್ಯವಾಗಲಿದೆ.
| ರಾಮಣ್ಣ ಕೆಂಚಳ್ಳೇರ ಅಧ್ಯಕ್ಷ, ರೈತ ಸಂಘ
ಎಲ್ಲಿಯೂ ರಸಗೊಬ್ಬರದ ಅಭಾವ ಇಲ್ಲ ಎಂದು ಸ್ವತ: ಕೃಷಿ ಸಚಿವರು ಹೇಳಿಕೆ ನೀಡಿದ್ದು, ಈಗ ಎಲ್ಲೆಡೆ ಯೂರಿಯಾ ಗೊಬ್ಬರದ ಅಭಾವ ಹೆಚ್ಚಾಗಿದೆ. ಕೂಡಲೆ ಎಲ್ಲ ರೈತರ ಬೇಡಿಕೆಗೆ ತಕ್ಕಂತೆ, ನಿಗದಿತ ದರದಲ್ಲಿ ಗೊಬ್ಬರ ಪೂರೈಸಬೇಕು.
| ಜಯಾನಂದ ಜ್ಯಾವಣ್ಣನವರ ಜೆಡಿಎಸ್ ಜಿಲ್ಲಾಧ್ಯಕ್ಷ
ಇನ್ನೆರಡು ದಿನಗಳಲ್ಲಿ ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿಗೆ 370 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದೆ. ಖಾಸಗಿ ಅಂಗಡಿಯವರಾಗಲಿ, ಸೊಸೈಟಿಯವರಾಗಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ಯಾವುದೇ ಗೊಬ್ಬರ ಲಿಂಕ್ ಮಾಡದೆ ರಸಗೊಬ್ಬರವನ್ನು ಮಾರಾಟ ಮಾಡಬೇಕು. ಇಲ್ಲದೆ ಹೋದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು.
| ಡಾ.ಎಂ.ವಿ. ಮಂಜುನಾಥ ಸಹಾಯಕ ನಿರ್ದೇಶಕ, ತಾಲೂಕು ಕೃಷಿ ಇಲಾಖೆ