

ರಾಣೆಬೆನ್ನೂರ: ಲಿಂಪಿ ವೈರಸ್‍ನಿಂದ ಮೃತಪಟ್ಟ ಎತ್ತಿನ ಶವವಿಟ್ಟು ರೈತರು ಪ್ರತಿಭಟನೆ ನಡೆಸಿದ ಘಟನೆ ನಗರದ ಸರ್ಕಾರಿ ಪಶು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ನಡೆಯಿತು.
ನಗರದ ದೊಡ್ಡಪೇಟೆಯ ಶಂಕರ ಬೇತೂರ ಎಂಬ ರೈತನ ಎತ್ತು ಲಿಂಪಿ ವೈರಸ್‍ನಿಂದ ಮಂಗಳವಾರ ಬೆಳಗ್ಗೆ ಮೃತಪಟ್ಟಿತ್ತು. ಇದಕ್ಕೆ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದಿರುವುದೆ ಕಾರಣ ಎಂದು ಆರೋಪಿಸಿದ ರೈತರು ಎತ್ತಿನ ಶವವನ್ನು ಆಸ್ಪತ್ರೆಯ ಆವರಣದಲ್ಲಿಟ್ಟು ಪ್ರತಿಭಟನೆ ನಡೆಸಿದರು.
ಎತ್ತಿಗೆ ರೋಗ ಕಾಣಿಸಿಕೊಂಡು 8 ದಿನ ಕಳೆದರೂ ಸರ್ಕಾರಿ ಆಸ್ಪತ್ರೆಯಲ್ಲಿ ವೈರಸ್‍ಗೆ ಸಂಬಂ„ಸಿದ ಚುಚ್ಚುಮದ್ದು ದೊರೆಯಲಿಲ್ಲ. ಇದರಿಂದಾಗಿ ಎತ್ತು ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗೆ ಸರ್ಕಾರ ಸರಿಯಾಗಿ ಔಷಧ ನೀಡುತ್ತಿಲ್ಲ. ವೈದ್ಯರು ಖಾಸಗಿ ಔಷಧ ಅಂಗಡಿಯಿಂದ ಔಷಧ ತರಲು ಬರೆದು ಕೊಡುತ್ತಿದ್ದಾರೆ. ಇದು ಬಡ ರೈತರಿಗೆ ತುಂಗಲಾರದ ತುತ್ತಾಗಿದೆ. ಆದ್ದರಿಂದ ಸ್ಥಳೀಯ ಶಾಸಕರು ಘಟನಾ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಸರಿಯಾದ ಔಷಧ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಬಂದ ಶಾಸಕ ಅರುಣಕುಮಾರ ಪೂಜಾರ, ಆಸ್ಪತ್ರೆಗೆ ಯಾವ ಔಷಧ ಲಭ್ಯವಿಲ್ಲ ಎಂಬ ಕುರಿತು ಕೂಡಲೇ ವೈದ್ಯರಿಂದ ಮಾಹಿತಿ ಪಡೆದು ಅದನ್ನು ತರಿಸುವ ವ್ಯವಸ್ಥೆ ಮಾಡಲಾಗುವುದು. ಮುಂದೆ ಈ ರೀತಿ ಸಮಸ್ಯೆ ಆಗದಂತೆ ಎಚ್ಚರ ವಹಿಸಲು ಸಂಬಂಧಪಟ್ಟ ಅ„ಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.