

ಕೊಳ್ಳೇಗಾಲ: ತಾಲೂಕಿನ ಕೆರೆ, ಕಾಲುವೆಗಳ ಹೂಳು, ಜಂಗಲ್ ತೆರವುಗೊಳಿಸಬೇಕು. ಕೆರೆಗಳಿಗೆ ಕಲುಷಿತ ನೀರು ಸೇರದಂತೆ ಕ್ರಮ ವಹಿಸಬೇಕು. ಕೆರೆ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಕಬಿನಿ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಮುಂಭಾಗ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ದಶರಥ್ ಮಾತನಾಡಿ, ಕೆರೆ, ಕಾಲುವೆ ಸಂರಕ್ಷಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಗುಂಡಾಲ್ ಜಲಾಶಯ ವ್ಯಾಪ್ತಿಗೆ ಬರುವ ಕೆರೆಗಳಲ್ಲಿ ಹೂಳು ತುಂಬಿದೆ. ಅಲ್ಲದೆ, ಕಾಲುವೆಗಳಲ್ಲಿ ಜಂಗಲ್ ಬೆಳೆದು ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಕೊಳ್ಳೇಗಾಲ ತಾಲೂಕು ಸುತ್ತಲೂ ಅರಣ್ಯ, ಬೆಟ್ಟ ಗುಡ್ಡಗಳಿವೆ. ಮಳೆ ಬಂದರೆ ಕಾಲುವೆ ಮೂಲಕ ನೀರು ಹರಿದು ಕೆರೆ ಭರ್ತಿಯಾಗುತ್ತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಹೂಳು, ಜಂಗಳ್‌ಗಳಿಂದ ಕಾಲುವೆ ಭರ್ತಿಯಾಗಿದೆ. ಕಬಿನಿ ಜಲಾಶಯದಿಂದ ನೀರು ಬಿಟ್ಟರೂ ಕೆರೆ ತುಂಬುತ್ತಿಲ್ಲ ಎಂದರು.
ಕೆರೆಗಳಿಗೆ ಕಲುಷಿತ ನೀರು ಹರಿಯಬಿಡಲಾಗುತ್ತಿದ್ದು, ಒತ್ತುವರಿಯಾಗಿವೆ. ಇತ್ತೀಚೆಗೆ ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಈ ಭಾಗಕ್ಕೆ ಆಗಮಿಸಿದ್ದರು. ಸಂತೇಮರಳ್ಳಿಯಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದರು. ಕೆರೆ, ಕಾಲುವೆ ಸರಿಯಾಗಿದೆಯೇ ಎಂಬುದನ್ನು ಸರಿಯಾಗಿ ನೋಡಲಿಲ್ಲ. ರೈತರ ಸಮಸ್ಯೆ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಎಂಡಿ ಕೊಳ್ಳೇಗಾಲಕ್ಕೆ ಬರಬೇಕು. ರೈತರ ಸಮಸ್ಯೆ ಆಲಿಸಿ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಕಬಿನಿ ಪ್ರಭಾರ ಕಾರ್ಯಪಾಲಕ ಇಂಜಿನಿಯರ್ ರಮೇಶ್, ಎಇಇ ರಾಮಕೃಷ್ಣ ಸ್ಥಳಕ್ಕೆ ಧಾವಿಸಿ ರೈತರ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ನೀರಾವರಿ ಇಲಾಖೆಯ ಎಂಡಿ ಬರಬೇಕೆಂದು ರೈತರು ಪಟ್ಟು ಹಿಡಿದು ಧರಣಿ ಮುಂದುವರಿಸಿದರು. ಗುಂಡಾಲ್ ಜಲಾಶಯ ಸ್ಥಿರ ಅಚ್ಚುಕಟ್ಟು ಪ್ರದೇಶ ಹಿತರಕ್ಷಣಾ ಸಮಿತಿಯ ರಾಮಕೃಷ್ಣ, ನಾಗರಾಜು, ಬಸವರಾಜು, ಮಲ್ಲಪ್ಪ ಇತರರಿದ್ದರು.