

ಸೋಮವಾರಪೇಟೆ: ಕೃಷಿ ಇಲಾಖೆಯ ಪಿಎಂಕೆಎಸ್‌ವೈ ಯೋಜನೆಯಡಿಯಲ್ಲಿ ಐಗೂರು, ನೇರುಗಳಲೆ, ಹಾನಗಲ್ಲು, ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಸರ್ಕಾರದ ಸಹಾಯಧನದಲ್ಲಿ ಕೃಷಿ ಪರಿಕರಗಳನ್ನು ಶಾಸಕ ಡಾ.ಮಂತರ್‌ಗೌಡ ಸೋಮವಾರ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ದೇಶದ ಬೆನ್ನೆಲುಬು ರೈತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ರೈತರಿಗೆ ತಲುಪಿಸುವ ಜವಾಬ್ದಾರಿ ಕೃಷಿ ಇಲಾಖೆಗಿದೆ. ರೈತರಿಗೆ ಸೌಲಭ್ಯಗಳನ್ನು ನೀಡಿದಾಗ ಆಹಾರ ಬೆಳೆಗಳ ಉತ್ಪಾದನೆ ಹೆಚ್ಚಾಗುತ್ತದೆ.
ಕಳೆಕೊಚ್ಚುವ ಯಂತ್ರ, ಪವರ್ ಸ್ಪ್ರೇಯರ್, ಹಸುಗಳಿಗೆ ಬಳಸುವ ಮ್ಯಾಟ್ ಸಹಾಯಧನದಲ್ಲಿ ವಿತರಿಸಲಾಗಿದೆ. ಈಗಾಗಲೇ ಸಾಕಷ್ಟು ಭತ್ತ ಭೂಮಿ ಕಾಫಿ ಮತ್ತು ಅಡಕೆ ತೋಟಗಳಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಅನೇಕ ಕಾರಣಗಳಿದ್ದರೂ ರೈತರು ಕೃಷಿ ಬೆಳೆಗಳನ್ನು ಕೈಬಿಡಬಾರದು ಎಂದು ಮನವಿ ಮಾಡಿದರು.
ಆಹಾರದ ಉತ್ಪಾದನೆ ಕುಂಟಿತವಾಗುತ್ತಿದ್ದು ಕೃಷಿಯನ್ನು ಲಾಭದಾಯಕವಾಗಿ ಮುನ್ನೆಡೆಸಲು ಯಾಂತ್ರೀಕೃತ ಬೇಸಾಯ ಪದ್ಧತಿಗೆ ಸರ್ಕಾರ ಒತ್ತು ನೀಡುತ್ತಿದೆ. ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಈ ಎಲ್ಲ ಯೋಜನೆಗಳನ್ನು ರೈತರು ದುರ್ಬಳಕೆ ಮಾಡಿಕೊಳ್ಳದೆ, ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಸೂಡ ಅಧ್ಯಕ್ಷ ಕೆ.ಎ. ಆದಮ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕಾಂತರಾಜ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ಚೇತನ್, ಕಿರಣ್ ಉದಯಶಂಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಮತ್ತಿತರರು ಇದ್ದರು.