

ಮದ್ದೂರು: ಅಸಕ್ತ ಜಾನುವಾರುಗಳ ರಕ್ಷಣೆಗಾಗಿ ಗೋ ಶಾಲೆಯನ್ನು ಆರಂಭಿಸಿದ್ದು, ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿಯ ಹೂತಗೆರೆ ಗ್ರಾಮದಲ್ಲಿ ಗುರುವಾರ ಗೋ ಶಾಲೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗೋ ಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕುವ ಸಾಮರ್ಥ್ಯ ಇದೆ. ಬೋರ್‌ವೆಲ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ, ಮೇವು ಸಂಗ್ರಹ ಮಾಡಲು ಸ್ಥಳ ಹಾಗೂ ಚಿಕಿತ್ಸೆ ನೀಡುವುದು ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಗೋ ಶಾಲೆಯ ಪಕ್ಕದಲ್ಲಿ ಮೇವು ಬೆಳೆಯಲು 10 ಎಕರೆ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಗೋ ಶಾಲೆಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಜಾನುವಾರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆ ಉಂಟಾದಾಗ ರೈತರು ಗೋ ಶಾಲೆಗೆ ಜಾನುವಾರುಗಳನ್ನು ಕರೆತಂದರೆ ಮೇವು, ನೀರು ಮತ್ತು ನೆರಳು ನೀಡುವುದು, ರೋಗ ಬಂದ ಹಾಗೂ ಅಸಕ್ತ ಜಾನುವಾರುಗಳು ಇದ್ದರೆ ಅವುಗಳನ್ನು ಕರೆದುಕೊಂಡು ಬಂದು ಗೋ ಶಾಲೆಗೆ ಬಿಟ್ಟರೆ ಅವುಗಳನ್ನು ಆರೈಕೆ ಮಾಡುವುದು, ಕಳ್ಳ ಸಾಗಣೆ ಸಂದರ್ಭದಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ರಕ್ಷಿಸಿದ ಜಾನುವಾರುಗಳಿಗೆ ಆಶ್ರಯ ನೀಡುವುದು ಈ ಗೋ ಶಾಲೆ ಉದ್ದೇಶವಾಗಿದೆ ಎಂದರು.
ಸುಮಾರು 2 ವರ್ಷಗಳಿಂದ ಗೋ ಶಾಲೆ ಉದ್ಘಾಟನೆಗೊಳ್ಳದೆ ನನೆಗುದಿಗೆ ಬಿದ್ದಿತ್ತು. ಈಗ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ ಉದ್ಘಾಟನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಗೋ ಶಾಲೆಗೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳಿಗೆ ರೈತರು ಅಗತ್ಯ ಸಹಕಾರ ನೀಡಿದರೆ ಗೋ ಶಾಲೆಯನ್ನು ಯಶಸ್ವಿಯಾಗಿ ನಡೆಲು ಸಾಧ್ಯವಾಗುತ್ತದೆ. ಗೋ ಶಾಲೆಯು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಈ ಭಾಗದ ರೈತರಿಗೆ ಹಾಗೂ ರಾಸುಗಳಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಎಂದರು.
ಗ್ರಾಪಂ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷೆ ಲಲಿತಾ, ಟಿಎಪಿಎಂಎಸ್ ನಿರ್ದೇಶಕ ಶಂಕರಲಿಂಗಪ್ಪ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದು, ಪಶು ವೀಕ್ಷಕ ಶ್ರೀನಿವಾಸ್ ಇದ್ದರು.
ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ
ವಿಜಯವಾಣಿ ಪತ್ರಿಕೆಯಲ್ಲಿ ಜೂ.3 ರಂದು ಉದ್ಘಾಟನಾ ಭಾಗ್ಯವಿಲ್ಲದ ಗೋ ಶಾಲೆ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಂಡು ಗೋ ಶಾಲೆ ಉದ್ಘಾಟನೆ ಮಾಡಿರುವುದು ತಾಲೂಕಿನ ರೈತರಿಗೆ ಸಂತಸ ತಂದಿದೆ ಹಾಗೂ ಪತ್ರಿಕೆಯ ವರದಿ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.