ರೈತರು ತಾಳೆ, ಜೇನು ಕೃಷಿ ಮಾಡಲಿ

31blrp2.
ಬೇಲೂರು ಪಟ್ಟಣದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಳೆ ಗಿಡ ನೆಟ್ಟ ನಂತರ ಜೇನು ವೀಕ್ಷಿಸುತ್ತಿರುವ ಶಾಸಕ ಎಚ್.ಕೆ.ಸುರೇಶ್ ಇತರರು.
Published on

ಬೇಲೂರು: ರೈತರು ಬೆಳೆಯುವ ಬೆಳೆಗಳಿಗೆ ರೋಗ ಬಾಧೆ ಕಾಡಿದರೆ ಮತ್ತೊಂದೆಡೆ ಬೆಳೆಗೆ ಸರಿಯಾದ ಬೆಲೆ ಸಿಗದೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ಹೀಗಾಗಿ ರೈತರು ಪರ್ಯಾಯವಾಗಿ ತಾಳೆ ಹಾಗೂ ಜೇನು ಕೃಷಿಗೆ ಮುಂದಾದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಶಾಸಕ ಎಚ್.ಕೆ.ಸುರೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಇಲಾಖೆ ಆವರಣ ಜಿಲ್ಲಾ ಪಂಚಾಯಿತಿ ಯೋಜನೆಯಡಿ ಬುಧವಾರ ಆಯೋಜಿಸಿದ್ದ ಜೇನು ಪೆಟ್ಟಿಗೆ ಹಾಗೂ ತಾಳೆ ಗಿಡ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರೂ ಬೆಳೆಗೆ ರೋಗಗಳು ಕಾಣಿಸಿಕೊಂಡು ನಷ್ಟ ಅನುಭವಿಸುವಂತಾಗಿದೆ. ಆದರೂ ರೈತರು ಛಲ ಬಿಡದೆ ತಮ್ಮ ವೃತ್ತಿಯಲ್ಲಿ ಕಷ್ಟ ಸುಖಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗದೆ ತಮಗಿರುವ ಜಮೀನಿನಲ್ಲೆ ಪರ್ಯಾಯವಾಗಿ ಬೇರೆ ಬೇರೆ ಬೆಳೆ ಬೆಳೆಯಲು ಮುಂದಾಗಬೇಕು. ಜತೆಗೆ ಇತ್ತೀಚಿನ ದಿನಗಳಲ್ಲಿ ತಾಳೆ ಬೆಳೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಸಹಕಾರ ನೀಡುತ್ತಿದ್ದು, ಹೆಚ್ಚಿನ ಕಾರ್ಮಿಕರಿಲ್ಲದೆ ತಾಳೆಯನ್ನು ಉತ್ತಮವಾಗಿ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಗಟ್ಟಿಗೊಳ್ಳಬಹುದಾಗಿದೆ. ಇದರೊಂದಿಗೆ ಜೇನು ಕೃಷಿಯಲ್ಲಿ ತೊಡಗಿದರೆ ಅದರಿಂದಲೂ ಆದಾಯ ಗಳಿಸಬಹುದು. ಇದಕ್ಕಾಗಿ ರೈತರಿಗೆ ಸರ್ಕಾರ ಇಲಾಖೆಯಿಂದ ಜೇನು ಪೆಟ್ಟಿಗೆ ವಿತರಿಸುತ್ತಿದ್ದು. ಇದರ ಸದುಪಯೋಗವನ್ನು ತಾಲೂಕಿನ ರೈತರು ಪಡೆದುಕೊಳ್ಳಬೇಕು ಎಂದರು.

ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೆಳೆಗೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಂಕಷ್ಟದಲ್ಲಿದ್ದೇವೆ. ಆದ್ದರಿಂದ ರೈತರು ಒಂದೇ ಬೆಳೆಗೆ ಗಂಟು ಬೀಳದೆ ತಾಳೆ ಹಾಗೂ ಜೇನು ಕೃಷಿಯತ್ತಲೂ ಮುಂದಾಗಬೇಕು ಎಂದರು.

ತಾಳೆ ಬೆಳೆ ಕೃಷಿಕ ಸಿದ್ದೇಗೌಡ ಮಾತನಾಡಿ, ತಾಳೆ ಬೆಳೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಜತೆಗೆ ಕನಿಷ್ಠ ಕಾರ್ಮಿಕರಿದ್ದರೆ ಸಾಕು ಉತ್ತಮ ಫಸಲು ಪಡೆಯಬಹುದು. ಇದರೊಂದಿಗೆ ಜೇನು ಸಾಕಣೆ ಮಾಡುವುದರಿಂದ ತಾಳೆ ಬೆಳೆ ಸೇರಿದಂತೆ ಇತರ ಬೆಳೆಗೂ ಅನುಕೂಲವಾಗುತ್ತದೆ. ಈಗಾಗಲೇ ಬೇಲೂರು ತಾಲೂಕಿನಲ್ಲಿ ಹಲವಾರು ರೈತರು ತಾಳೆ ಬೆಳೆಯುತ್ತಿದ್ದು, ಇನ್ನುಳಿದವರು ಬೆಳೆಯಲು ಮುಂದಾಗಬೇಕು ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಸತೀಶ್, ಪ್ರಗತಿಪರ ರೈತ ಪ್ರದೀಪ್, ತಾಳೆ ಬೆಳೆ ಮಾರುಕಟ್ಟೆ ವ್ಯವಸ್ಥಾಪಕ ಹನುಮೇಗೌಡ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಸೇರಿದಂತೆ ಇತರರಿದ್ದರು. ಇದೇ ಸಂದರ್ಭ ನೂರಾರು ರೈತರಿಗೆ ತಾಳೆ ಗಿಡ ಹಾಗೂ ಜೇನು ಪೆಟ್ಟಿಗೆಯನ್ನು ಶಾಸಕ ಎಚ್.ಕೆ.ಸುರೇಶ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net