

ಶಿಡ್ಲಘಟ್ಟ: ಕೈಗಾರಿಕೆಗಳ ಸ್ಥಾಪನೆಗಾಗಿ ಜಮೀನು ಸ್ವಾಧಿನ ಪಡಿಸಿಕೊಳ್ಳುವುದನ್ನು ವಿರೋಧಿಸಿ ಕೆಐಎಡಿಬಿ ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸಲು ಮಂಗಳವಾರ ತೆರಳುತ್ತಿದ್ದ ರೈತರನ್ನು ನಗರದ ಜಂಗಮಕೋಟೆ ವೃತ್ತದಲ್ಲಿಯೇ ಪೊಲೀಸರು ತಡೆದರು. ಈ ವೇಳೆ ಪೊಲೀಸರ ವಿರುದ್ಧ ರೈತರು ಹರಿಹಾಯ್ದರು.
ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ ಪೊಲೀಸರ ಕ್ರಮ ಖಂಡಿಸಿ ರಸ್ತೆಯಲ್ಲೇ ರೈತರು ಪ್ರತಿಭಟನೆಗೆ ಕುಳಿತ ಕಾರಣ ಚಿಕ್ಕಬಳ್ಳಾಪುರ&ಕೋಲಾರ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ 3 ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಬಂದ್ ಆಗಿ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು.
ಜಂಗಮಕೋಟೆ ಹೋಬಳಿಯಲ್ಲಿ ಫಲವತ್ತಾದ ಕೃಷಿ ಜಮೀನನ್ನು ಕೈಗಾರಿಕೆಗೆ ಸ್ವಾಧಿನ ಪಡಿಸಿಕೊಳ್ಳುವುದನ್ನು ಕೈಬಿಡುವಂತೆ ಕೆಐಎಡಿಬಿ ಕಚೇರಿಗೆ ಅರ್ಜಿ ಸಲ್ಲಿಸಲು ಜಂಗಮಕೋಟೆ ಹೋಬಳಿಯ ರೈತರು ಬೆಂಗಳೂರಿಗೆ ತೆರಳಲು ಅಣಿಯಾಗಿದ್ದರು. ಈ ವೇಳೆ ಜಂಗಮಕೋಟೆ ವೃತ್ತದಲ್ಲಿ ರೈತರನ್ನು ತಡೆದ ಪೊಲೀಸರು ಕೆಐಎಡಿಬಿ ಅಧಿಕಾರಿಗಳನ್ನು ಇಲ್ಲಿಗೆ ಕರೆಸುತ್ತೇವೆ. ನಿಮ್ಮ ಸಮಸ್ಯೆಗಳನ್ನು ತಿಳಿಸಿ ಬಗೆಹರಿಸಿಕೊಳ್ಳಿ. ಬೆಂಗಳೂರಿಗೆ ಹೋಗುವುದು ಬೇಡ ಎಂದು ಮನವಿ ಮಾಡಿ ರೈತರನ್ನು ತಡೆದರು.
ಪಟ್ಟು ಬಿಡದೆ ಪ್ರತಿಭಟನೆ ನಡೆಸಿದ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಕೆಐಎಡಿಬಿ ಹಿರಿಯ ಅಧಿಕಾರಿಗಳನ್ನು ಕರೆಸಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಿಕೊಡಲಾಯಿತು.
ರೈತ ಕಾಳಜಿ ಏಕಿಲ್ಲ?
ಈ ಹಿಂದೆ ಸಚಿವ ಎಂ.ಬಿ. ಪಾಟೀಲ್ ಅವರ ಸಹಿ ಇರುವ ಪತ್ರವನ್ನು ತಂದಿದ್ದ ಕೆಐಎಡಿಬಿ ಆಯುಕ್ತರು ಆಗಸ್ಟ್ 2ನೇ ವಾರ ರೈತರ ಸಭೆ ಕರೆದು ಮಾತನಾಡುತ್ತೇವೆ. ಅದುವರೆಗೂ ಕೆಐಎಡಿಬಿಯಿಂದ ಯಾವುದೆ ಪ್ರಕ್ರಿಯೆ ನಡೆಸುವುದಿಲ್ಲ. ಎಲ್ಲ ರೈತರು ಸಮಸ್ಯೆಯ ಅರ್ಜಿ ಸಲ್ಲಿಸಿ ಎಂದು ಹೇಳಿದ್ದರು. ಅದರಂತೆ ಇಂದು ಬೆಂಗಳೂರಿನ ಕಚೇರಿಗೆ ಅರ್ಜಿ ಸಲ್ಲಿಸಲು ತೆರಳುತ್ತಿದ್ದೆವು. ಆದರೆ ಪೊಲೀಸರು ಇಲ್ಲಿಯೇ ತಡೆದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ನಮ್ಮನ್ನು ತಡೆದಿದ್ದಾಗಿ ಪೊಲೀಸರು ಹೇಳುತ್ತಿದ್ದಾರೆ. ಬೆಂಗಳೂರಿನ ಜನರ ಬಗ್ಗೆ ಇರುವ ಕಾಳಜಿ ಜಮೀನು ಕಳೆದುಕೊಳ್ಳುವ ರೈತರ ಬಗ್ಗೆ ಏಕಿಲ್ಲ ಎಂದು ರೈತ ಸಂದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಪ್ರಶ್ನಿಸಿದರು.