

ರಾಣೆಬೆನ್ನೂರ: ಇಲ್ಲಿಯ ಕಮಲಾ ನಗರದಲ್ಲಿ ಇಎಸ್‌ಐ ಆಸ್ಪತ್ರೆ ಉದ್ಘಾಟಿಸಲು ಬಂದಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ ಎದುರು ರೈತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆಯಿತು. ರೈತರು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಸಚಿವ ಶಿವರಾಮ್ ಹೆಬ್ಬಾರ ರೈತ ಸಂಪರ್ಕ ಕೇಂದ್ರಕ್ಕೆ ರೈತರನ್ನು ಕರೆದುಕೊಂಡು ಹೋಗಿ ಸಭೆ ನಡೆಸಿದರು.
ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಬೇಕು ಎಂದರೆ ನಿಮ್ಮ ಕಚೇರಿ ಜಿಲ್ಲೆಯಲ್ಲಿಲ್ಲ. ಓಟಿಎಸ್ ಮೂಲಕ ರೈತರ ಸಾಲ ತುಂಬಿಕೊಳ್ಳಲು ಅವಕಾಶ ನೀಡಬೇಕು ಎಂದು ಒಂದು ವರ್ಷದಿಂದ ಮಾಕನೂರ ಬ್ಯಾಂಕ್ ಎದುರು ಧರಣಿ ಮಾಡಿದ್ದೇವೆ. ನಮ್ಮ ಸಮಸ್ಯೆಗೆ ಈವರೆಗೂ ಯಾರೂ ಸ್ಪಂದಿಸಿಲ್ಲ. ಕೂಡಲೇ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಮಾಕನೂರ ಮಾತನಾಡಿ, ರೈತರ ಬೆಳೆಹಾನಿಗೆ ಬಂದ ಪರಿಹಾರ ಹಣವನ್ನು ಬ್ಯಾಂಕ್‌ನವರು ಸಾಲದ ಕಂತುಗಳಿಗೆ ತುಂಬಿಕೊಳ್ಳುತ್ತಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು. ರೈತರಿಗೆ ಸ್ಪಂದಿಸಿದ ಸಚಿವ ಶಿವರಾಮ್ ಹೆಬ್ಬಾರ, ಈ ಕುರಿತು ಜಿಲ್ಲಾಡಳಿತಕ್ಕೆ ಸೂಚಿಸಿ ಬ್ಯಾಂಕ್‌ನವರ ಸಭೆ ಕರೆದು ಸಮಸ್ಯೆ ಬಗೆಹರಿಸಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.