

ಅಣ್ಣಿಗೇರಿ: ಪಟ್ಟಣದ ರಾಜ್ಯ ಹೆದ್ದಾರಿ 137ರ ನವಲಗುಂದ- ಗದಗ ರಸ್ತೆಯಲ್ಲಿರುವ ರೇಲ್ವೆ ಗೇಟ್ ನಂ. 18ರಲ್ಲಿ ಮೇಲ್ಸೇತುವೆ ನಿರ್ವಣಕ್ಕಾಗಿ ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡದ್ದರಿಂದ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಪ್ರಕಾಶ ಅಂಗಡಿ, ಪಟ್ಟಣದ ಜನರ ಹಿತದೃಷ್ಟಿಯಿಂದ ನಾವು ಮೇಲ್ಸೇತುವೆ ನಿರ್ವಣಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ನೋಟಿಸ್ ಆಗಲಿ ಅಥವಾ ಪರಿಹಾರವನ್ನಾಗಲಿ ನೀಡಿಲ್ಲ. ನಮ್ಮ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ಬರುವವರೆಗೂ ಕಾಮಗಾರಿ ಆರಂಭಿಸದಂತೆ ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರೈತ ಮುಖಂಡ ಭಗವಂತಪ್ಪ ಪುಟ್ಟಣ್ಣವರ ಮಾತನಾಡಿದರು. ತಹಸೀಲ್ದಾರ್ ಸುಧೀರ್ ಸಾಹುಕಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರ ಮನವೊಲಿಸಿದರು. ಉಪವಿಭಾಗಾಧಿಕಾರಿಗಳ ಜತೆ ಮಾತನಾಡಿ 2 ತಿಂಗಳೊಳಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಕರಿವಾಳಪ್ಪ ಕಿಲಾರಿ, ನಿಂಗಪ್ಪ ಮುಂಡಸದ, ಬಾಬುಸಾಬ ಇಸ್ಮಾಯಿಲ್, ಈರಪ್ಪ ಆಡಕಾವು, ಚಾಂದಸಾಬ್ ಹಂಚಿನಾಳ, ನಿಂಗಪ್ಪ ವಿಟೋಜಿ, ಯಲ್ಲಪ್ಪ ಆಡಕಾವು, ಅಲ್ಲಾಬಕ್ಷ ಕಿನಕೇರಿ, ಈರಣ್ಣ ಕರವೀರಮಠ, ಸಂಗಮೇಶ ಅಂಗಡಿ, ಬಸವರಾಜ ಹಾದಿಮನಿ, ಗುರುಸಿದ್ದಪ್ಪ ಕೊಪ್ಪದ, ಡಿ ಎಲ್. ಆಡಕಾವು, ದಸ್ತಾಗೀರ ಸಂಗಟಿ, ನಿಂಗಪ್ಪ ಬಡ್ದೆಪ್ಪನವರ, ರೈಲ್ವೆ ಇಲಾಖೆಯ ಅಧಿಕಾರಿಗಳು, ನವಲಗುಂದ ಸಿಪಿಐ ರವಿ ಕಪ್ಪತ್ತನವರ, ಪಿಎಸ್ಐ ಸಿದ್ಧಾರೂಢ ಆಲದಕಟ್ಟಿ ಇದ್ದರು.