

ಕೆ.ಎಂ.ದೊಡ್ಡಿ: ವಿಶ್ವೇಶ್ವರಯ್ಯ ನಾಲೆಗಳಲ್ಲಿ ಹೂಳು ತೆಗೆಸಿ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕೆಂದು ಆಗ್ರಹಿಸಿ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ವಿವಿಧ ಗ್ರಾಮಗಳ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಕ್ಯಾತಘಟ್ಟ, ಅಣ್ಣೂರು, ಚಿಕ್ಕರಸಿನಕೆರೆ ಗ್ರಾಪಂ ವ್ಯಾಪ್ತಿಯ ರೈತರು ಜಮಾಯಿಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮುಟ್ಟನಹಳ್ಳಿ ಬಳಿಯ ಸೂಳೆ ಕೆರೆಯಿಂದ ನಿರ್ಮಿಸಲಾಗಿರುವ ಉತ್ತರ ಮತ್ತು ದಕ್ಷಿಣ ನಾಲೆಗಳಲ್ಲಿ ಹೂಳು ತುಂಬಿಕೊಂಡಿದ್ದು ಹೂಳು ತೆಗೆಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೂಳು ತುಂಬಿಕೊಂಡು ಸರಾಗವಾಗಿ ನೀರು ಹರಿಯುತ್ತಿಲ್ಲ. ಈ ಸಂಬಂಧ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಿರ್ಲಕ್ಷಿಸಿದ್ದಾರೆ. ಸೂಳೆ ಕೆರೆಯ ಎರಡೂ ನಾಲೆಗಳಲ್ಲಿ ಹೂಳು ತೆಗೆಸಿ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ಅವಿನಾಶ್‌ಗೆ ರೈತರು ಮನವಿ ಸಲ್ಲಿಸಿದರು. ಮುಖಂಡರಾದ ಕ್ಯಾತಘಟ್ಟ ಗಿರೀಶ್, ಕೆ.ರವಿಕುಮಾರ್, ಕ್ಯಾತಘಟ್ಟ ವಿಜಿಕುಮಾರ್, ಅಲಭುಜನಹಳ್ಳಿ ಸ್ವಾಮಿ, ತ್ರಿಶೂಲ್ ಚಂದ್ರಣ್ಣ, ಅಣ್ಣೂರು ಜಯಸ್ವಾಮಿ, ಪ್ರಸನ್ನ, ಎ.ಪಿ.ಚಂದ್ರ, ಗುರುದೇವರಹಳ್ಳಿ ಸಿದ್ದರಾಜು, ಅಪ್ಪಾಜಿ, ಕಾರ್ಕಹಳ್ಳಿ ಮಹೇಶ್, ಸಿನಿಜ ಸಿದ್ದರಾಜು , ಗ್ರಾಪಂ ಅಧ್ಯಕ್ಷ ಸಿದ್ದರಾಜು, ಸದಸ್ಯ ರಾಜೇಶ್, ಶಿವನಂಜಪ್ಪ ಪಾಲ್ಗೊಂಡಿದ್ದರು.